ಉಳ್ಳಾಲ: ಮಣ್ಣು, ಕಲ್ಲು, ಮರ, ಪ್ರಾಣಿಪಕ್ಷಿಗಳಲ್ಲಿ ದೇವರನ್ನು ಕಾಣುವವರು ಹಿಂದೂಗಳು. ಇಲ್ಲಿ ದೈವೀ ಶಕ್ತಿಯೆದುರು ಅನ್ಯಾಯವೆಸಗಿ ಬದುಕಲು ಸಾಧ್ಯವೇ ಇಲ್ಲ. ಕೆಲವರಿಗೆ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಮಾಡಿದರೆ , ಇನ್ನು ಕೆಲವರಿಗೆ ಭಾನುವಾರ ಪ್ರಾರ್ಥನೆ ಮಾಡಿದಲ್ಲಿ ಮಾತ್ರ ದೇವರು ಸಿಗುತ್ತಾನೆ. ಆದರೆ ಹಿಂದೂ ಧರ್ಮಕ್ಕೆ ಪ್ರತಿನಿತ್ಯವೂ ಪ್ರಾರ್ಥನೆ ಮಾಡಿದಲ್ಲಿ ದೇವರು ಕಾಣುತ್ತಾನೆ ಎಂದು ಆರ್ ಎಸ್ ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿ ಸಮಿತಿ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.




ಕೊರಗತನಿಯ ಸೇವಾ ಸಮಿತಿ (ಕೆಟಿಎಸ್ ಎಸ್ ಬಾಯ್ಸ್ ) ಪಿಲಾರು ಪ್ರಕಾಶನಗರ ದ 10 ನೇ ವಾರ್ಷಿಕೋತ್ಸವ ಹಾಗೂ ಬಿಸು ಪರ್ಬ-2021 ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿ ಮಾತನಾಡಿದರು.


ಹಿಂದೂಗಳ ದೇವರ ಆರಾಧನೆಗೆ ನಿಗದಿತ ಸಮಯವಿಲ್ಲ, ದಿನವಿಲ್ಲ, ಧಿಕ್ಕುಗಳಿಲ್ಲ. ಆದರೆ ಕೆಲವರಿಗೆ ಶುಕ್ರವಾರ ನಮಾಜ್ ಮಾಡಿದರೆ ಮಾತ್ರ ದೇವರು ಕಾಣುತ್ತಾನೆ. ಇನ್ನು ಕೆಲವರಿಗೆ ಭಾನುವಾರ ಪ್ರಾರ್ಥನೆ ಮಾಡಿದಲ್ಲಿ ಮಾತ್ರ ದೇವರು ಒಲಿಯುತ್ತಾನೆ ಎಂದ ಅವರು ಅರ್ಥವಿಲ್ಲದ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಿದ್ದೇವೆ, ಯಾವುದೇ ಆಧಾರವಿಲ್ಲದೆ ಆಂಗ್ಲರು ತೋರಿಸಿದ ದಿನವನ್ನು ಹೊಸವರ್ಷವೆಂದು ಆಚರಿಸುತ್ತಿದ್ದೇವೆ. ಆದರೆ ಪರಿಸರವನ್ನೇ ಆಧಾರವಾಗಿಟ್ಟುಕೊಂಡು ಪ್ರಕೃತಿಯನ್ನು ಆರಾಧಿಸುವ ಹಿಂದೂ ಸಮಾಜ , ಪ್ರಾಕೃತಿಕವಾಗಿ ಅರಳುವ, ಚಿಗುರುವ ಸಮಯವನ್ನು ಆಧಾರವಾಗಿಟ್ಟುಕೊಂಡು ಹೊಸವರ್ಷದ ಆರಂಭವನ್ನು ಮಾಡುತ್ತಿದ್ದೇವೆ. ಜಗತ್ತಿನ ಯಾವುದೇ ಮೂಲೆಗೂ ತೆರಳಿದರೂ ನಮ್ಮ ಸಂಸ್ಕøತಿಯ ಭಾಗ ಅಲ್ಲಿರುತ್ತವೆ . ಸರಿದಾರಿಯಲ್ಲಿ ಹೋಗಲು ಇರುವ ಚಿಂತನೆ ಹಿಂದೂಗಳಲ್ಲಿ ಬೆಳೆಯಬೇಕಿದೆ. ಉಳ್ಳಾಲದಲ್ಲಿಯೂ ನಾವು ನಾವೇ ಗಲಾಟೆ ಮಾಡುವುದರಿಂದ ಒಗ್ಗಟ್ಟಿಲ್ಲದೆ ಒಡಕು ಕಾಣುತ್ತಿದೆ. ಎಲ್ಲರಿಗೂ ಒಳಿತು ಬಯಸುವ ಸಮಾಜ ಹಿಂದೂ ಸಮಾಜ. ಎಲ್ಲಾ ಧರ್ಮೀಯರನ್ನು ಜತೆಯಾಗಿ ಬಾಳಲು ಅವಕಾಶ ಮಾಡಿಕೊಟ್ಟಂತಹ ಸಮಾಜ ಇದು. ಕೊರಗಜ್ಜನನ್ನು ಎಲ್ಲಾ ಧರ್ಮೀಯರು ಆರಾಧಿಸುತ್ತಾರೆ. ಅಂತಹ ದೈವೀ ಕಲೆಗೆ ಅಪಚಾರ ಎಸಗಿದರೆ ಅದು ಬಿಡುವುದಿಲ್ಲ. ಇದಕ್ಕೆ ಇತ್ತೀಚೆಗೆ ಓರ್ವ ಸತ್ತು, ಇನ್ನೋರ್ವನಿಗೆ ಹುಚ್ಚು ಹಿಡಿದಿರುವುದು ಸಾಕ್ಷಿ. ಹಿಂದೆ ಧರ್ಮ ಮತ್ತು ಸಂಸ್ಕøತಿ ಮನೆಯೊಳಗೆ ಇತ್ತು. ತಾಯಂದಿರೇ ಸಂಸ್ಕøತಿಯನ್ನು ಉಳಿಸಿದವರು. ಆದರೆ ಈಗ ತಾಯಿ ಅನ್ನುವುದು ಪ್ರದರ್ಶನಕ್ಕೆ ಇಟ್ಟ ವಸ್ತಿನಂತೆ ವರ್ತಿಸಲಾಗುತ್ತಿದೆ. ನಮ್ಮ ವಿಚಾರಗಳನ್ನು ಉಳಿಸಿ ಹೊರಗಿನ ಉತ್ತಮ ವಿಚಾರಗಳನ್ನು ಮಾತ್ರ ಸ್ವೀಕರಿಸಬೇಕಿದೆ. ಈ ಮೂಲಕ ಸಂಸ್ಕøತಿಯ ಪಾಠ ತಾಯಂದಿರಿಂದ ಆಗಬೇಕು ಎಂದರು.
ಉದ್ಯಮಿ ಅನಿಲ್ ದಾಸ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಂ.ಜಾ.ವೇ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಕುಂಪಲ, ಹಿಂದೂಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಆರ್ ಶೆಟ್ಟಿ ಅಡ್ಯಾರುಪದವು ,ಬಿಜೆಪಿ ಜಿಲ್ಲಾ ಯುವಮೋರ್ಚ ಕಾರ್ಯದರ್ಶಿ ಸುಜಿತ್ ಶೆಟ್ಟಿ ಕಂಬ್ಲಪದವು, ಉದ್ಯಮಿ ಶಿವಪ್ಪ ಆಚಾರ್ಯ, ಕೊರಗ ತನಿಯ ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ಪೂಜಾರಿ, ಕೊರಗ ತನಿಯ ಸೇವಾ ಸಮಿತಿ ಮಹಿಳಾ ಮಂಡಳಿ ಅಧ್ಯಕ್ಷೆ ವೈಷಾಲಿ ರಾಜೇಶ್ ಪೂಜಾರಿ , ಕೆಟಿಎಸ್ ಎಸ್ ಬಾಯ್ಸ್ ಇದರ ಅಧ್ಯಕ್ಷ ನಿಶಾಂತ್ ಪ್ರಕಾಶನಗರ ಉಪಸ್ಥಿತರಿದ್ದರು.
ಸಿಂಧು ಶೆಟ್ಟಿ ಸ್ವಾಗತಿಸಿದರು. ಪ್ರವೀಣ್ ಎಸ್.ಕುಂಪಲ ನಿರೂಪಿಸಿದರು.