ಉಳ್ಳಾಲ್ ನ್ಯೂಸ್ ಡೆಸ್ಕ್
ತೊಕ್ಕೊಟ್ಟು: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್ ಡಿಕ್ಕಿ ಹೊಡೆದು ಆಕೆ ಬಸ್ ನಡಿ ಸಿಲುಕಿದರೂ ಪವಾಡಸದೃಶವಾಗಿ ಪಾರಾಗಿರುವ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನ ವೇಳೆ ನಡೆದಿದೆ.
ಉಳ್ಳಾಲ ದರ್ಗಾ ಝಿಯಾರತ್ ಮುಗಿಸಿ ಮುಡಿಪು ಮನೆಗೆ ಮರಳುತ್ತಿದ್ದ ಬೀಫಾತಿಮ್ಮ ಎಂಬವರು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರಸ್ತೆ ದಾಟುತ್ತಿದ್ದರು. ಈ ಸಂದರ್ಭ ಮಂಗಳೂರಿನಿಂದ ತಲಪಾಡಿ ಕಡೆಗೆ ಬರುತ್ತಿದ್ದ ಬಸ್ ಅವರಿಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಉರುಳಿದ ಅವರು ಬಸ್ಸಿನಡಿ ಸಿಲುಕಿದ್ದರು. ಆದರೆ ಚಾಲಕನ ಸಮಯ ಪರಿಪಾಲನೆಯಿಂದ ಕೂಡಲೇ ಬ್ರೇಕ್ ಹಾಕಿದ್ದರಿಂದಾಗಿ ಬೀಫಾತಿಮ್ಮ ಅವರ ಮೇಲೆ ಚಕ್ರ ಹರಿಯುವುದು ತಪ್ಪಿ, ಪವಾಡಸದೃಶವಾಗಿ ಪಾರಾಗಿದ್ದಾರೆ. ಘಟನೆಯಿಂದ ಉದ್ರಿಕ್ತ ಗುಂಪೊಂದು ಚಾಲಕನ ಸೀಟನ್ನೇರಿ ಬಸ್ ನ ಕೀ ಅನ್ನು ತೆಗೆದು ಮುಂದೆ ಚಲಿಸದಂತೆ ತಡೆಹಿಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಉಳ್ಳಾಲ ಪೊಲೀಸರು ಉದ್ರಿಕ್ತರನ್ನು ಚದುರಿಸಿ, ಚಾಲಕನನ್ನು ವಶಕ್ಕೆ ಪಡೆದುಕೊಂಡು ಮುಚ್ಚಳಿಕೆ ಬರೆಸಿ ಬಿಡುಗಡೆಗೊಳಿಸಿದ್ದಾರೆ.