ಉಳ್ಳಾಲ್ ನ್ಯೂಸ್ ನೆಟ್ ವರ್ಕ್


ಕೋಟೆಕಾರು: ಕೋಟೆಕಾರು ಗ್ರಾಮ ಪಂಚಾಯತ್ ಪ್ರಥಮವಾಗಿ ತ್ಯಾಜ್ಯಮುಕ್ತ ಗ್ರಾಮ ಪಂಚಾಯತ್ ಆಗಬೇಕು. ತ್ಯಾಜ್ಯ ಮುಕ್ತ ಗ್ರಾಮ ಪಂಚಾಯತ್ ಆಗಿ ರೂಪಿಸಬೇಕಾದರೆ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರ ಸಹಕಾರ ಇದ್ದರೆ ತ್ಯಾಜ್ಯಮುಕ್ತ ಪಟ್ಟಣ ಪಂಚಾಯತ್ ಆಗುತ್ತದೆ. ಅದೇ ರೀತಿ ವ್ಯಾಜ್ಯ ಮುಕ್ತ ಗ್ರಾಮವಾಗಿ, ರುಣ ಮುಕ್ತ ಗ್ರಾಮ ಪಂಚಾಯತ್ ಆಗಲು ಎಲ್ಲರೂ ಪಣ ತೊಡಬೇಕು ಮಾತ್ರವಲ್ಲದೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.



ಅವರು ಕೋಟೆಕಾರು ಬೀರಿಯ ಯುವಕ ಮಂಡಲ ವಠಾರದಲ್ಲಿ ಕೋಟೆಕಾರು ಗ್ರಾಮ ಪಂಚಾಯತ್ ಅನ್ನು ಕೋಟೆಕಾರು ಪಟ್ಟಣ ಪಂಚಾಯತ್ ಮೇಲ್ದರ್ಜೆಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಥಳೀಯ ಶಾಸಕರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರಿಗೆ ಕೋಟೆಕಾರ್ ಪಟ್ಣಣ ಪಂಚಾಯತ್‍ನ ನಾಗರಿಕ ಸಮಿತಿ ಕೋಟೆಕಾರು ಇದರ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೋಟೆಕಾರು ಗ್ರಾಮವನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಿರವುದರಿಂದ ಇಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಶಕ್ತಿ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ಆನುದಾನದಿಂದ ಮಾದರಿ ಪಟ್ಟಣ ಪಂಚಾಯತ್ ಆಗಿ ರೂಪಿಸಲಾಗುವುದು .ಕೋಟೆಕಾರು ಗ್ರಾಮ ಪಂಚಾಯತ್ ಆತ್ಯಂತ ಶ್ರೀಮಂತ ಗ್ರಾಮಗಳಲ್ಲೊಂದು ಇಲ್ಲಿನ ಆರ್ಥಿಕ ಸಂಪತ್ತನ್ನು ಕ್ರೋಡೀಕರಿಕರಿಸಿಕೊಳ್ಳುವುದರೊಂದಿಗೆ ರಾಜ್ಯ ಸರಕಾರದ ವಿವಿಧ ಅನುದಾನಗಳನ್ನು ಬಳಸಿಕೊಂಡು ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಎಲ್ಲಾ ರಸ್ತೆಗಳನ್ನು ಮಾದರಿ ರಸ್ತೆಯಾಗಿ ನಿರ್ಮಾಣ ಮಾಡಲಾಗುವುದು ಎಂದರು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಶ್ರೀ ಶೃಂಗೇರಿ ಶಂಕರ ಮಠ ಕೋಟೆಕಾರ್ ಇದರ ಧರ್ಮಾಧಿಕಾರಿ ಸತ್ಯ ಶಂಕರ ಬೊಳ್ಳಾವ ವಹಿಸಿದ್ದರು. ಮುಖ್ಯ ಆತಿಥಿಗಳಾಗಿ ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ, ಪಾನೀರು ಚರ್ಚ್‍ನ ಧರ್ಮಗುರು ರೆ| ಫಾ| ಡೆನಿಸ್ ಸುವಾರಿಸ್,ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಪಂಚಾಯತ್ ಸದಸ್ಯ ಎನ್. ಎಸ್. ಕರೀಂ, ಬೀರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಕಾಚಾರು, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಜುಮ್ಮಾ ಮಸೀದಿ ದೇರಳಕಟ್ಟೆಯ ಅಧ್ಯಕ್ಷ ಅಬೂಬಕರ್ ನಾಟೆಕಲ್, ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಪಿ.ಸೋಮೇಶ್ವರ, ಕೋಟೆಕಾರ್ ಪಟ್ಟಣ ಪಂಚಾಯತ್‍ನ ನಾಗರೀಕ ಸಮಿತಿ ಅಧ್ಯಕ್ಷ ಸುಕುಮಾರ್ ಭಟ್, ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್, ಆಟೋರಿಕ್ಷಾ ಚಾಲಕ ಮಾಲಕರ ಸಂಘ ಬೀರಿ ಇದರ ಅಧ್ಯಕ್ಷ ದೇವದಾಸ್ ಭಾಗವಹಿಸಿದ್ದರು.