UN NETWORKS


ಕೈರಂಗಳ : “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಚಲನ ಚಿತ್ರದ ಪ್ರಮುಖ ಕಥಾಭಾಗ ಚಿತ್ರೀಕರಣಗೊಂಡಿದ್ದ ಬಂಟ್ವಾಳ ತಾ| ಕೈರಂಗಳ ಗ್ರಾಮದ ದುಗ್ಗಜ್ಜರಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಆಂಗ್ಲ ಮಾಧ್ಯಮವೂ ಆರಂಭಗೊಂಡಿದೆ. ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣದ ಅಧಿಕೃತ ಉದ್ಘಾಟನೆ ಸೆ. 15ರಂದು ನಡೆಯಲಿದ್ದು, ಜತೆಗೆ ಹಳೆ ವಿದ್ಯಾರ್ಥಿಗಳ ಸಂಗಮ, ಚಿತ್ರ ನಿರ್ಮಾಪಕ ರಿಷಭ್ ಶೆಟ್ಟಿ ಅವರಿಗೆ ಸಮ್ಮಾನ ನಡೆಯಲಿದೆ.




ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾದ ಯಶಸ್ಸಿನ ಬಳಿಕ ರಿಷಭ್ ಶೆಟ್ಟಿ ಮತ್ತು ತಂಡ ಶಾಲೆ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದ್ದರು. ಶಾಲೆಯ ಶಿಥಿಲ ಛಾವಣಿ ಮರು ನಿರ್ಮಾಣ, ಗೋಡೆಗಳಲ್ಲಿ ಬಣ್ಣದ ಚಿತ್ತಾರ ಮೂಡಿಸಲಾಗಿತ್ತು. ಬಳಿಕ ವಿದ್ಯಾರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಆರಂಭಕ್ಕೆ ಪ್ರೋತ್ಸಾಹ ನೀಡಿದ್ದರು.
ವಿದ್ಯೋದಯ ಪ್ರೈಮರಿ ಶಾಲೆ
ಆಂಗ್ಲ ಮಾಧ್ಯಮ ವಿಭಾಗಕ್ಕೆ ವಿದ್ಯೋದಯ ಪ್ರೈಮರಿ ಶಾಲೆ ಎಂದು ನಾಮಕರಣ ಮಾಡಲಾಗಿದೆ. ವಿದ್ಯಾರ್ಥಿಗಳ ಸಮವಸ್ತ್ರ, ಮಧ್ಯಾಹ್ನದ ಊಟ ಸೇರಿದಂತೆ ಎಲ್ಲ ವೆಚ್ಚವನ್ನು ರಿಷಭ್ ಶೆಟ್ಟಿ ತಂಡ ಭರಿಸಲಿದೆ. ತಂಡ ಶಾಲೆಯನ್ನು ಮೂರು ವರ್ಷಕ್ಕೆ ದತ್ತು ಸ್ವೀಕರಿಸಲಿದ್ದು, ಶಾಲೆಯ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಸೆ. 15ರ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ , ಶಾಸಕ ಯು.ಟಿ. ಖಾದರ್ ಮತ್ತು ಗಣ್ಯರು ಭಾಗವಹಿಸಲಿದ್ದಾರೆ.