ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು: ಮಹಿಳೆಯ ಕರಿಮಣಿ ಸರ ಕಳವಿಗೆ ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಗೂಸಾ ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾತ್ರಿ ಕುತ್ತಾರು ಬಳಿಯ ಅಜ್ಜನಕಟ್ಟೆ ಸಮೀಪ ನಡೆದಿದೆ.

ಕಿನ್ಯಾ ಕೋಡಿ ಹೌಸ್ ನಿವಾಸಿ ಅಬ್ದುಲ್ ರೆಹಮಾನ್ (26) ಸೆರೆಸಿಕ್ಕಾತ. ಕೆಲಸ ಮುಗಿಸಿ ಕುತ್ತಾರಿನಿಂದ ಸುಭಾಷನಗರದತ್ತ ನಡೆದುಕೊಂಡು ಹೋಗುತ್ತಿದ್ದ ಸುಮಾರು 35-40ರ ಹರೆಯದ ಮಹಿಳೆಯ ಕರಿಮಣಿ ಸರವನ್ನು ಎಳೆಯಲು ಯತ್ನಿಸಿ ಅದು ವಿಫಲವಾಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಪೊದೆಯೊಂದರಲ್ಲಿ ಅಡಗಿ ಕುಳಿತ ರೆಹಮಾನ್ ಮಹಿಳೆ ನಡೆದುಕೊಂಡು ಬರುತ್ತಿದ್ದಂತೆ ಏಕಾಏಕಿ ಹಾರಿ ಆಕೆಯ ಕುತ್ತಿಗೆಯಲ್ಲಿದ್ದ ಕರಿಮಣಿಸರವನ್ನು ಎಳೆಯಲು ಯತ್ನಿಸುತ್ತಿದ್ದಂತೆ ಅದು ತುಂಡಾಗಿತ್ತು. ಆದರೆ ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದು ರಕ್ಷಣೆಗಾಗಿ ಬೊಬ್ಬೆ ಹೊಡೆದಾಗ ಸಾರ್ವಜನಿಕರು ಸೇರಿ ರೆಹಮಾನ್‍ನನ್ನು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ರೆಹಮಾನ್‍ನನ್ನು ವಶಕ್ಕೆ ಪಡೆದುಕೊಂಡು ಕಳವು ಪ್ರಕರಣ ದಾಖಲಿಸಿದ್ದಾರೆ.