UN NETWORKS
ಉಳ್ಳಾಲ: ಅಪಘಾತ ಸಂದರ್ಭದಲ್ಲಿ ಘಟನೆಯ ಸ್ಥಳದಿಂದ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಗಾಯಾಳುವನ್ನು ಸಾಗಿಸುವಾಗ ಸರಿಯಾದ ಆರೋಗ್ಯ ಕ್ರಮಗಳನ್ನು ಪಾಲನೆ ಮಾಡದಿದ್ದರೆ ತೊಂದರೆಗಳು ಜಾಸ್ತಿ ಎಂದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ (ಕ್ಷೇಮ) ಡೀನ್ ಡಾ| ಪ್ರಕಾಶ್ ಪಿ.ಎಸ್. ಅಭಿಪ್ರಾಯಪಟ್ಟರು.
ನಿಟ್ಟೆ ಸಿಮ್ಯುಲೇಶನ್ ಸೆಂಟರ್‍ನಲ್ಲಿ ಅಪಘಾತದ ಗಾಯಾಳುವಿನ ನಿರ್ವಹಣೆಯಲ್ಲಿ ತರಬೇತಿ – ಇಂಟರ್‍ನ್ಯಾಷನಲ್ ಟ್ರಾಮಾ ಲೈಫ್ ಸಪೋ ರ್ಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ರೋಗಿಗಳು ಮತ್ತು ಗಾಯಾಳುಗಳನ್ನು ಸಾಗಿಸುವಾಗ ಅತ್ಯಂತ ಜಾಗರೂಕತೆ ವಹಿಸುವ ಅಗತ್ಯ ಇದೆ. ಇದರ ಕುರಿತು ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಅಗತ್ಯ ಇದೆ. ರೋಗಿಗಳ ಅಸಮರ್ಪಕ ನಿರ್ವಹಣೆಯಿಂದ ಫಲಿತಾಂಶ ಕೆಟ್ಟದಾಗುವ ಸಾಧ್ಯತೆಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇಮದ ಕುಲಸಚಿವ ಡಾ| ಜಯಪ್ರಕಾಶ ಶೆಟ್ಟಿ, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ್, ನಿಟ್ಟೆ ಸಿಮ್ಯುಲೇಶನ್ ಕೇಂದ್ರದ ಸಂಯೋಜಕ ಡಾ| ರವೀಂದ್ರ ಯು. ಎಸ್. ಮತ್ತಿತರರು ಉಪಸ್ಥಿತರಿದ್ದರು.
ಎಲುಬು ಮತ್ತು ಕೀಲು ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ| ಸಿದ್ಧಾರ್ಥ ಶೆಟ್ಟಿ ಸ್ವಾಗತಿಸಿದರು. ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ರಾಜಶೇಖರ ಮೋಹನ್ ವಂದಿಸಿದರು. ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕ ಡಾ| ಶ್ರೀಪಾದಜಿ ಮೆಹೆಂದಳೆ ಕಾರ್ಯಕ್ರಮ ನಿರ್ವಹಿಸಿದರು. ಮೂವತ್ತೈದಕ್ಕೂ ಮಿಕ್ಕಿ ಬೇರೆ ಬೇರೆ ಸಂಸ್ಥೆಗಳ ವೈದ್ಯರು ಹಾಗು ಅರೆ ವೈದ್ಯಕೀಯ ಸಿಬ್ಬಂದಿ ತರಬೇತಿ ಪಡೆದು ಅಮೇರಿಕಾದ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದುಕೊಂಡರು.