

ಉಳ್ಳಾಲ: ಮಹಿಳಾ ಬಲ, ಧಾರ್ಮಿಕ, ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿಗಳಿರುವಲ್ಲಿ ದೈವಸಂಕಲ್ಪದಂತೆ ಯಾವುದೇ ಕಾರ್ಯಗಳು ಸಾಂಗವಾಗಿ ನೆರವೇರುವುದು. ಉಳ್ಳಾಲದ ಹನುಮಾನ್ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಮಂದಿರದ ಆರಂಭದ ಕಾರ್ಯಗಳಲ್ಲಿ ಎಲ್ಲಾ ರೀತಿಯ ಶುಭ ಲಕ್ಷಣಗಳಿರುವುದರಿಂದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ರಾಮ ಮಂದಿರದಂತೆಯೇ , ಭವ್ಯ ಮಂದಿರದ ಕೆಲಸವೂ ಪೂರ್ಣಗೊಳ್ಳಲಿದೆ ಎಂದು ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣೆ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಹನುಮಾನ್ ನಗರ ಸುಂದರಿಬಾಗ್ ಇಲ್ಲಿನ ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಇಲ್ಲಿ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಮಂದಿರದ ನೀಲನಕ್ಷೆಯ ಅನಾವರಣ ಮತ್ತು ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಕಷ್ಟಗಳು ಜಾಸ್ತಿ. ಆದರೆ ಮುಖ್ಯಪ್ರಾಣನೆಂದಲ್ಲಿ ಉಸಿರು. ಆ ಉಸಿರಿಗಾಗಿ ಎಲ್ಲರೂ ಸೇರಿಕೊಂಡು ಜ್ಯೋತಿಯನ್ನು ಬೆಳಗಿಸಿದಾಗ ಹಿರಿಯರಿಗೆ ಗೌರವ ಹಾಗೂ ಪುಣ್ಯ ಕಾರ್ಯವನ್ನು ನೆರವೇರಿಸಿದಂತಾಗುವುದು. ದುಡಿದ ಆದಾಯದ ಒಂದು ಪಾಲನ್ನು ತಿರುಪತಿಗೇ ಹಾಕಬೇಕೆಂದೇನಿಲ್ಲ. ಶೈಕ್ಷಣಿಕವಾಗಿ ಹಿಂದುಳಿದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ನಿರಾಶ್ರಿತರಿಗೆ ವಿನಿಯೋಗಿಸಿದಲ್ಲಿ ಅಂಥಹದ್ದೇ ಪುಣ್ಯ ಪ್ರಾಪ್ತಿಯಾಗುವುದು. ಕಟ್ಟಡಕ್ಕೆ 1.5 ಕೋಟಿ ವೆಚ್ಛ ಆಗುವುದೆಂದಾದಲ್ಲಿ 5 ಕೋಟಿ ಕ್ಷೇತ್ರಕ್ಕೆ ಹರಿದುಬರಲಿದೆ. ಈ ಮೂಲಕ ಮಂದಿರದ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಲಿ ಎಂದು ಹಾರೈಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಯುವಸಮುದಾಯ ಕೆಟ್ಟ ಹಾದಿಗಳನ್ನು ಹಿಡಿಯದೆ, ಸಂಸ್ಕಾರವನ್ನು ಬೆಳೆಸುವಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿರಿ. ಈ ಮೂಲಕ ಮಕ್ಕಳು ಕೂಡಾ ಉತ್ತಮ ದಾರಿಯನ್ನು ಹಿಡಿಯಲು ಸಾಧ್ಯವಾಗುತ್ತದೆ. ಮಂದಿರಕ್ಕೆ ವೈಯಕ್ತಿಕವಾಗಿ ಹಾಗೂ ಹಿತೈಷಿಗಳಿಂದ ಸಹಕಾರವನ್ನು ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ಉಳ್ಳಾಲ ವೈದ್ಯನಾಥ ದೈವಸ್ಥಾನದ ದೈವಪಾತ್ರಿ ದಾಮೋದರ ಯಾನೆ ಮುಂಡ ಪೂಜಾರಿ, ಚೀರುಂಭ ಭಗವತಿ ಕ್ಷೇತ್ರದ ಮಂಜಪ್ಪ ಕಾರ್ನವರ್, ಕಂಕನಾಡಿ ಸಾಯಿ ಪ್ರಾಪರ್ಟಿಸ್ನ ಮುಖ್ಯಸ್ಥರುಗಳಾದ ರಾಧೇಶ್ ಮತ್ತು ಸುಧೀನ್ ಚೌಟ, ವಳಚಿಲ್ತಾಯ ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ್ ಉಳ್ಳಾಲ್, ಸೋಮೇಶ್ವರ ಶಿವಪಂಚಾಕ್ಷರಿ ಕೋಟಿನಾಮಜಪ ಯಜ್ಞ ಸಮಿತಿಯ ದೇವಕಿ ಆರ್ ಉಳ್ಳಾಲ್, ಕಮಾಲಾಕ್ಷ , ಮಹಾಗಣಪತಿ ಕ್ಷೇತ್ರದ ಆಡಳಿತ ಮೊಕ್ತೇಸರ ಹರೀಶ್ ಚಂದ್ರ , ಮಾಜಿ ಕೌನ್ಸಿಲರ್ ಲಕ್ಷ್ಮಣ್ ಉಳ್ಳಾಲ್, ನಿಟ್ಟೆ ಆರ್ಕಿಟೆಕ್ಟ್ ಕಾಲೇಜು ಪ್ರಾಧ್ಯಾಪಕ ದೀಕ್ಷಿತ್ ಶೆಟ್ಟಿ, ರಾಜಾರಾಮ್ ಭಾರದ್ವಜ್, ಕೋಟಿ ರಾಮನಾಮ ಜಪಯಜ್ಞದ ರಾಮ್ ಗಣೇಶ್, ವ್ಯಾಯಾಮ ಶಿಕ್ಷಕ ವಿಜಯ ಅಮೀನ್ ಉಪಸ್ಥಿತರಿದ್ದರು.
ವಿಶ್ವನಾಥ್ ಮತ್ತು ಭಜನಾ ತಂಡದಿಂದ ಪ್ರಾರ್ಥನೆ ನೆರವೇರಿತು. ಅಂಜನಿ ಮಹಿಳಾ ಮಂಡಲದ ಗೌರವ ಸಲಹೆಗಾರರಾದ ಮಂಜುಳಾ ಗುಡ್ಡೆಹಿತ್ಲು ಸ್ವಾಗತಿಸಿದರು. ಅನಿಲ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು. ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ನವನೀತ್ ಸುಂದರಿಬಾಗ್ ವಂದಿಸಿದರು.
ಕಾರ್ಯಕ್ರಮದಲ್ಲಿ ಅಂಜನಿ ಮಹಿಳಾ ಮಂಡಲದ ಲಾಂಛನವನ್ನು ರಾಧೇಶ್ ಮತ್ತು ಸುಧೀನ್ ಚೌಟ ಅನಾವರಣಗೊಳಿಸಿದರು.
`3,000 ಚದರಡಿಯ ಎರಡು ಅಂತಸ್ತಿನ ಕಟ್ಟಡದ ವಿನ್ಯಾಸಗೊಳಿಸಲಾಗಿದೆ. 100 ಮಂದಿಯಷ್ಟು ಭಜನೆ ನಡೆಸುವ ಅವಕಾಶ ಕಲ್ಪಿಸುವ ವ್ಯವಸ್ಥೆಯಿದೆ. 1.25 ಕೋಟಿ ರೂ. ನಲ್ಲಿ ನಿರ್ಮಾಣಗೊಳ್ಳಲಿರುವ ಮಂದಿರದ ಒಂದು ಚದರಡಿಗೆ ರೂ. 2,500 ಲೆಕ್ಕ ಹಿಡಿದರೆ, 5,000 ಮಂದಿ ಜತೆಯಾದಲ್ಲಿ ಕಟ್ಟಡ ಸರಾಗವಾಗಿ ನಿರ್ಮಾಣವಾಗಲಿದೆ’
ದೀಕ್ಷಿತ್ ಶೆಟ್ಟಿ
ಪ್ರಾಧ್ಯಾಪಕರು
ನಿಟ್ಟೆ ಆರ್ಕಿಟೆಕ್ಟ್ ವಿಭಾಗ
ಮಹಿಳಾ ಮಂಡಲ ಅಸ್ತಿತ್ವಕ್ಕೆ
45 ವರ್ಷಗಳ ಇತಿಹಾಸವಿರುವ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಅಂಜನಿ ಮಹಿಳಾ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಇದರ ಲಾಂಛನ ಬಿಡುಗಡೆಯೂ ಸಮಾರಂಭದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಅರ್ಪಿತಾ, ಕಾರ್ಯದರ್ಶಿ ಮೋನಿಷಾ, ಕೋಶಾಧಿಕಾರಿ ರಮ್ಯಾ, ಜೊತೆ ಕರ್ಯದರ್ಶಿಗಳಾಗಿ ಮೋನಿಷಾ ಪಿ., ಗೌರವ ಸಲಹೆಗಾರರಾಗಿ ಮಂಜುಳಾ, ಉಪಾಧ್ಯಕ್ಷರಾಗಿ ಧರ್ಮಿಣಿ, ಸಂಘಟನಾ ಕರ್ಯದರ್ಶಿಯಾಗಿ ಪ್ರಮೀಳಾ ಆಯ್ಕೆಗೊಂಡಿದ್ದಾರೆ.