ಉಳ್ಳಾಲ: ಮಾಡೂರಿನ ಜನತೆಯ ಬಹುಬೇಡಿಕೆಯ ಸರಕಾರಿ ಶಾಲೆಯನ್ನು ಆಂಗ್ಲಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಶಾಸಕರು ಹಾಗೂ ವಿಧಾನಸಭಾ ಅಧ್ಯಕ್ಷರು ಯು.ಟಿ.ಖಾದರ್ ಗ್ರೀನ್ ಸಿಗ್ನಲ್ ನೀಡಿದ್ದು, ಸರಕಾರದಿಂದ ಅನುದಾನ ಬರುವವರೆಗೆ ತನ್ನ ವೇತನದಿಂದ ರೂ.1 ಲಕ್ಷ ವನ್ನು ಆಂಗ್ಲಮಾಧ್ಯಮ ಶಾಲೆಯ ಕಾರ್ಯಾಚರಣೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.




ಸರಕಾರಿ ಶಾಲೆ ಉನ್ನತೀಕರಣದ ಪ್ರಸ್ತಾವ ಕೇಳಿಬಂದ ಹಿನ್ನೆಲೆಯಲ್ಲಿ ಮಾಡೂರು ಶಾಲೆಯಲ್ಲಿ , ಅಭಿವೃದ್ಧಿ ಸಮಿತಿಯೊಂದಿಗೆ ಎರಡನೇ ಬಾರಿ ಸಭೆ ನಡೆಸಿದ ಅವರು ಶಿಕ್ಷಣಾಧಿಕಾರಿಗಳಿಗೆ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಪೂರಕ ದಾಖಲೆಗಳೆಲ್ಲವನ್ನು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸಿದ್ಧಪಡಿಸುವುದಾಗಿ ತಿಳಿಸಿದ ಅವರು
ಎಲ್ ಕೆ.ಜಿ ಯುಕೆಜಿ ಒಂದನೇ ತರಗತಿಗೆ ದಾಖಲಾತಿಗಳನ್ನು ಆರಂಭಿಸುವಂತೆ ತಿಳಿಸಿದ್ದಾರೆ. ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ, ವಿದ್ಯಾರ್ಥಿಗಳ ಸಂಖ್ಯೆಯನ್ನು ಸಮಿತಿ, ಶಿಕ್ಷಕ ವೃಂದದೊಂದಿಗೆ ಸೇರಿಕೊಂಡು ನಡೆಸಬೇಕು. ಎಲ್ ಕೆ.ಜಿ , ಯುಕೆಜಿಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು. ಕಮಿಟಿ ರಚಿಸಿ ಶಿಕ್ಷಕರಿಗೆ ಎಷ್ಟು ವೇತನ ಜೋಡಿಸಬಹುದು ಅನ್ನುವ ಚರ್ಚೆ ನಡೆಸಬೇಕಿದೆ. ವಿದ್ಯಾರ್ಥಿಗಳಿಗೆ ಶುಲ್ಕ ಎಷ್ಟು ಹಾಕಬಹುದು ಅನ್ನುವ ಲೆಕ್ಕಚಾರ ಮಾಡಬೇಕು. ಮಾದರಿ ಶಾಲೆಯನ್ನಾಗಿ ರಚಿಸಬೇಕಿದೆ. ಕೊಠಡಿಗಳನ್ನು ಕಡಿಮೆ ಖರ್ಚಿನಲ್ಲಿ ಆಕರ್ಷಕ ವಾಗಿ ಪೇಟಿಂಗ್ ಮಾಡಬೇಕು. ಎಲ್ಲರೂ ತಂಡವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿರಿ. ಇದರಿಂದ ಯಶಸ್ಸು ಖಂಡಿತ. ಒಂದನೇ ತರಗತಿ ಆರಂಭಿಸಲು ಕೆಲವೊಂದು ಸಮಸ್ಯೆ ಗಳಿವೆ ಆದರೆ ಅದರ ಬಗ್ಗೆ ನಾನು ಶಿಕ್ಷಣ ಸಚಿವರ ಜೊತೆ ಹಾಗೂ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.ಕಮಿಟಿ ಹಾಗೂ ಊರಿನವರು ಸೇರಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ವರ್ಷದ ಬಜೆಟ್ ನಡೆಸಿ ಎಲ್ಲಾ ಖರ್ಚುವೆಚ್ಚಗಳ ಪಟ್ಟಿಯನ್ನು ಮಾಡಬೇಕು. ಶಿಕ್ಷಕರ ನೇಮಕಾತಿಯಲ್ಲೂ ಯಾವುದೇ ಲಾಭಿ ಮಾಡದಿರಿ. ಚಟುವಟಿಕೆಯಿಂದ ಕೂಡಿದ ಶಿಕ್ಷಕರಿಗೆ ಮೊದಲ ಆದ್ಯತೆಯನ್ನು ನೀಡಿ ಎಲ್ ಕೆ.ಜಿ. ಯು.ಕೆಜಿ , ಒಂದನೇ ತರಗತಿಗೆ ಶಿಕ್ಷಕರು ಹಾಗೂ ಒಂದು ಆಯಾ ಬೇಕಿದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೊಳಿಯಾರ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಜೀಝ್ ಮಾಡೂರು, ಕಾಂಗ್ರೆಸ್ ಕೋಟೆಕಾರು ಸಮಿತಿ ಅಧ್ಯಕ್ಷ ಸುಕುಮಾರ್ ಗಟ್ಟಿ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷೆ ಸುರೇಖ ಚಂದ್ರಹಾಸ್, ಚಂದ್ರಿಕಾ ರೈ, ಕೌನ್ಸಿಲಾರಾದ ಸುಜೀತ್ ಮಾಡೂರು, ಬಶೀರ್, ಅಹಮ್ಮದ್ ಭಾವ, ಇಶಾಕ್ , ಮೊಹಮ್ಮದ್ ದೇರಳಕಟ್ಟೆ , ಮಾಜಿ ಕೌನ್ಸಿಲರಾದ ಹಮೀದ್ ಹಸನ್, ನಾಮ ನಿದೇರ್ಶಿತ ಸದಸ್ಯರಾದ ಸಫಿಯಾ, ಗಫೂರು ಮಾಡೂರು , ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್ ,ಕ್ಷೇತ್ರ ಸಮನ್ವಯ ಅಧಿಕಾರಿ ಸುಶ್ಮಾ ವಿ ಕಿಣಿ, ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಬುಚ್ಚಾನ್ ಉಪಸ್ಥಿತರಿದ್ದರು.