



ಗ್ರಾಮದ ಬಡವರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ 9 ಎಕರೆ ಜಮೀನು ಮೀಸಲಿಡಲಾಗಿದ್ದು ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ, ಈಗಾಗಲೇ ಹಲವು ಅರ್ಜಿಗಳು ಬಂದಿದ್ದು ಲೇಔಟ್ ಮಾದರಿಯ ನಿವೇಶನ ನಿರ್ಮಾಣ ಪ್ರಕ್ರಿಯೆ ನಡೆದಿದೆ. ಮೈದಾನ, ಅಂಗನವಾಡಿ, ಪಾರ್ಕ್, ಆಸ್ಪತ್ರೆಗೂ ಜಾಗ ಮೀಸಲಿಡಲಾಗಿದ್ದು ನಾಲ್ಕು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್ ಹೇಳಿದರು.
ಹರೇಕಳ ಗ್ರಾಮದ 5ನೇ ವಾರ್ಡ್ ನ್ಯೂಪಡ್ಪು ತ್ವಾಹಾ ಜುಮಾ ಮಸೀದಿ ಬಳಿ ರಸ್ತೆ ತಡೆಗೋಡೆ ಕೆಲಸಕ್ಕೆ ಗುರುವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಮಲಾರ್ ಕೋಡಿಯಲ್ಲಿ ಆಯುಶ್ಮಾನ್ ಆಸ್ಪತ್ರೆ ನಿರ್ಮಾಣ ಆಗಲಿದ್ದು ಅನುದಾನ ಬಿಡುಗಡೆಯಾಗಿದೆ. ನಿವೇಶನ ಪ್ರಕ್ರಿಯೆ ಪ್ರಯುಕ್ತ ಗ್ರಾಮದ ನಿಯೋಗ ಸ್ಪೀಕರ್ ಖಾದರ್ ಅವರನ್ನು ಭೇಟಿಯಾಗಿದ್ದು ಅನುದಾನ ನೀಡುವ ಭರವಸೆ ದೊರೆತಿದೆ. ಈ ಕಾರ್ಯ ಯಶಸ್ಸಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರವಲ್ಲದೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಿಳಿಸಿದರು.
ತ್ವಾಹಾ ಜುಮಾ ಮಸೀದಿಯ ಖತೀಬ್ ಝೈನುದ್ದೀನ್ ಸಖಾಫಿ ಕೆಲಸಕ್ಕೆ ಚಾಲನೆ ನೀಡಿದರು. ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ., ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಸದಸ್ಯರಾದ ಅಬ್ದುಲ್ ಸತ್ತಾರ್ ನ್ಯೂಪಡ್ಪು, ಎಸ್.ಎಂ.ಬಶೀರ್, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಉಂಬುದ, ಮಸೀದಿಯ ಅಧ್ಯಕ್ಷ ಉಮರಬ್ಬ, ಮಾಜಿ ಅಧ್ಯಕ್ಷ ಲತೀಫ್, ಸಿಪಿಐಎಂ ಮುಖಂಡ ಉಮರಬ್ಬ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಪ್ರಾಸ್ತಾವಿಕವಾಗಿ ಮಾತನಾಡಿದರು.