





ತೊಕ್ಕೊಟ್ಟು: ತೊಕ್ಕೊಟ್ಟು-ಕೊಣಾಜೆ ರಸ್ತೆಯ ಸೇವಾಸೌಧದೆದುರು ನಡೆದ ಅಪಘಾತ ಬೆನ್ನಲ್ಲೇ ತಡರಾತ್ರಿ 9ರ ಸುಮಾರಿಗೆ ಡಿವೈಎಫ್ ಐ ಕಾರ್ಯಕರ್ತರು ಘಟನಾ ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ್ದಾರೆ. ಈ ನಡುವೆ ಕ್ಷೇಮ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಕೇಂದ್ರ ಸಚಿವರ ಕಾರನ್ನು ಸ್ಪೀಕರ್ ಯು.ಟಿ.ಖಾದರ್ ಕಾರೆಂದು ತಪ್ಪಾಗಿ ಗ್ರಹಿಸಿ ಡಿವೈಎಫ್ ಐ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ತಕ್ಷಣವೇ ಎಸ್ಕಾಟ್ ð ಮತ್ತು ಠಾಣಾ ಪೊಲೀಸರು ರಸ್ತೆ ತೆರವುಗೊಳಿಸಿ ಸಚಿವರ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಂಡರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ ಐ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ನಿತಿನ್ ಕುತ್ತಾರ್ ಇಲ್ಲಿನ ಶಾಸಕರಾದ ಯು.ಟಿ.ಖಾದರ್ ಈ ರಸ್ತೆಯನ್ನು ಟೋಲ್ ಮುಕ್ತ ರಸ್ತೆ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ, ಇವತ್ತು ಇಲ್ಲಿ ಅಪಘಾತ ಸಂಭವಿಸಿ ಒಂದು ಮಹಿಳೆಯ ಪ್ರಾಣವೇ ಹೋಗಿದೆ. ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದ ಇವರು ಯಾವ ಸೀಮೆಯ ಅಭಿವೃದ್ದಿಯ ಹರಿಕಾರ ಎಂದು ಹರಿಹಾಯ್ದರು.ಇನ್ನೊಂದು ವಾರದಲ್ಲಿ ಈ ರಸ್ತೆಯನ್ನು ಸರಿಪಡಿಸದೇ ಇದ್ದಲ್ಲಿ ಶಾಸಕರ ಕಛೇರಿಗೆ ತೆರಳಿ ಕಪ್ಪು ಬಾವುಟ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ` ಬಹಳ ಸಮಯದಿಂದ ಮಂಗಳೂರು ವಿವಿ ರಸ್ತೆಯು ಹದಗೆಟ್ಟು ಹೋಗಿದೆ.ರಸ್ತೆಯನ್ನ ಸರಿ ಪಡಿಸುವಂತೆ ಅನೇಕ ಬಾರಿ ಸ್ಥಳೀಯ ಶಾಸಕರಾದ ಯು.ಟಿ ಖಾದರ್ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆಸ್ಪತ್ರೆ,ಕಾಲೇಜು,ವಿಶ್ವ ವಿದ್ಯಾನಿಲಯ ಇದ್ದರೂ ಈ ರಸ್ತೆಯಲ್ಲಿ ವಾಹನಗಳು ಚಲಿಸಲು ಅಸಾಧ್ಯ.ಮಂಗಳೂರು ವಿವಿ ರಸ್ತೆಯಲ್ಲಿ ಬೆಳಿಗ್ಗಿನಿಂದ ರಾತ್ರಿವರೆಗೂ ಟ್ರಾಫಿಕ್ ಜಾಮ್ ಇರುತ್ತದೆ. ಇದಕ್ಕೆಲ್ಲ ಸ್ಪೀಕರ್ ಖಾದರ್ ಅವರೇ ನೇರ ಕಾರಣರಾಗಿದ್ದಾರೆ.ಮಾತೆತ್ತಿದರೆ ಅಭಿವೃದ್ಧಿ,ಅಭಿವೃದ್ಧಿಯ ಸರದಾರ ಅಂತ ಹೇಳ್ತಾರೆ.ಸುಸಜ್ಜಿತ ಒಂದು ರಸ್ತೆ ಮಾಡಲಾಗದಂತಹ ಸ್ಪೀಕರ್ ಅವರ ಅಭಿವೃದ್ಧಿ ಕಾರ್ಯಗಳು ಯಾವುದೆಂದು ಪ್ರಶ್ನಿಸಿದ್ದಾರೆ.ಮಕ್ಕಳು,ಮಹಿಳೆಯರು,ವೃದ್ಧರಿಗೆ ಹದಗೆಟ್ಟ,ಅವೈಜ್ನಾನಿಕ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ.ಶಾಸಕ ಖಾದರ್ ಮಾತ್ರ ದೇಶಗಳನ್ನ ಸುತ್ತುತ್ತಿದ್ದಾರೆ.ನರೇಂದ್ರ ಮೋದಿಯವರನ್ನ ಬಿಟ್ಟರೆ ದೇಶ ಸುತ್ತೋದರಲ್ಲಿ ಎರಡನೇಯವರಾಗಿ ಯು.ಟಿ ಖಾದರ್ ಅವರು ಖ್ಯಾತಿ ಪಡೆದಿದ್ದಾರೆ.ಆದಷ್ಟು ಶೀಘ್ರನೆ ಹದಗೆಟ್ಟ ರಸ್ತೆ ಸರಿ ಪಡಿಸದಿದ್ದಲ್ಲಿ ಯು.ಟಿ.ಖಾದರ್ ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಕಪ್ಪು ಬಾವುಟ ಪ್ರದರ್ಶಿಸುತ್ತೇವೆಂದು ಸುನಿಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ಉಪಾಧ್ಯಕ್ಷರಾದ ರಝಾಕ್ ಮುಡಿಪು,ಅಶ್ರಫ್ ಹರೇಕಳ ಕೋಶಾಧಿಕಾರಿ ಅಶ್ಫಾಕ್ ಅಲೇಕಳ,ಮುಖಂಡರಾದ ರಝಾಕ್ ಮೊಂಟೆಪದವು,ವಿಕಾಸ್ ಕುತ್ತಾರ್,ಅಲ್ತಾಫ್ ಮುಡಿಪು,ಸಿರಾಜ್ ಮೊಂಟೆಪದವು, ಅಕ್ಷಿತ್ ಕುತ್ತಾರ್,ಇಕ್ಬಾಲ್ ಹರೇಕಳ,ಹೈದರ್ ಆಲಡ್ಕ,ಬಶೀರ್ ಲಚ್ಚಿಲ್,ನೌಫಲ್ ಅಲೇಕಳ,ಸರ್ಫರಾಜ್ ಗಂಡಿ,ಅನ್ಸಾರ್ ಖಂಡಿಗ,ಶಾಫಿ ಮುಡಿಪು,ದಿವ್ಯರಾಜ್ ಕುತ್ತಾರ್,ರಫೀಕ್ ಹರೇಕಳ,ಇಬ್ರಾಹಿಂ ಮದಕ ಉಪಸ್ಥಿತರಿದ್ದರು.ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ವಂದಿಸಿದರು