

ಉಳ್ಳಾಲ: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಹುದೊಡ್ಡ ಕೋಟೆಕಾರು ಕೆ.ಸಿ.ರೋಡ್ ಶಾಖೆ ದರೋಡೆ ಪ್ರಕರಣವನ್ನು ವಾರದೊಳಗೆ ಬೇಧಿಸಲು ಸಹಕಾರಿಯಾದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹಾಗೂ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ನೇತೃತ್ವದ ಪೊಲೀಸ್ ತಂಡವನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ದರೋಡೆ ಪ್ರಕರಣ ನಡೆದ ದಿನದಂದೇ ವಿಧಾನಸಭಾ ಅಧ್ಯಕ್ಷರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಕ್ಷಣವೇ ದರೋಡೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೆ ಜಿಲ್ಲಾ ಭೇಟಿಯಲ್ಲಿದ್ದ ಮುಖ್ಯಮಂತ್ರಿ ಅವರ ಗಮನಕ್ಕೂ ತಂದು ಗೃಹಸಚಿವಾಲಯದಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಇಲಾಖೆಗೆ ಸೂಚನೆ ನೀಡುವಂತೆ ಮಾಡಿದ್ದರು. ತಕ್ಷಣಕ್ಕೆ ಪೊಲೀಸ್ ಕಮೀಷನರ್ ಕಮೀಷನರೇಟ್ ವ್ಯಾಪ್ತಿಯ ಐದು ಪೊಲೀಸ್ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯವನ್ನು ಆರಂಭಿಸಿದ್ದರು. ಅದರ ಫಲವಾಗಿ ಜ.23 ರ ವರೆಗೆ ನಾಲ್ಕು ಮಂದಿ ಆರೋಪಿಗಳ ಬಂಧನವಾಗಿದ್ದು, ಅಲ್ಲದೆ ಬ್ಯಾಂಕಿನಿಂದ ಕಳವು ನಡೆಸಿದ 18,250 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಬ್ಯಾಂಕ್ ಆಡಳಿತ ಮಂಡಳಿ ಅಭಿನಂದನೆಯನ್ನು ಸಲ್ಲಿಸಿದೆ.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಸಿಸಿಬಿಯ ಎಸಿಪಿ ಮನೋಜ್ ಕುಮಾರ್, ಮಂಗಳೂರು ದಕ್ಷಿಣ ವಲಯ ಎಸಿಪಿ ಧನ್ಯಾ ಎನ್ ನಾಯಕ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಉಪಾಧ್ಯಕ್ಷ ಕೆ.ಬಿ.ಅಬುಸಾಲಿ ಕಿನ್ಯ, ನಿರ್ದೇಶಕರುಗಳಾದ ಗಂಗಾಧರ್ ಯು., ಕೆ.ಕೃಷ್ಣಪ್ಪ ಸಾಲ್ಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು., ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಸುರೇಖಾ ಚಂದ್ರಹಾಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರ್ಷವರ್ಧನ್ ಉಳ್ಳಾಲ್ ಉಪಸ್ಥಿತರಿದ್ದರು.