
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧಿಕಾರಿಗಳ ವಿಳಂಬದಿಂದಾಗಿ ತಡವಾಗಿ ಆರಂಭವಾಗಿದ್ದು, ಮೊದಲ ಹಂತದಲ್ಲಿ ಸಭೆ ರದ್ದತಿಗೆ ಕೌನ್ಸಿಲರುಗಳು ಒತ್ತಾಯಿಸಿದರೂ ಬಳಿಕ ಅಧಿಕಾರಿಗಳ ಆಗಮನದಿಂದ ಒಂದು ಗಂಟೆ ತಡವಾಗಿ ಆರಂಭವಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೋಟೆಕಾರು ಪಟ್ಟಣ ಪಂಚಾಯತ್ ನ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಸಿಸಿಟವಿ ಅಳವಡಿಕೆ, ಹುಲ್ಲು ಕಡಿಯುವ ಯಂತ್ರ ಚಾಲನೆಗೆ ಹೆಚ್ಚುವರಿ ಪೌರಕಾರ್ಮಿಕರ ನಿಯುಕ್ತಿ, ಸರಕಾರಿ ಜಾಮೀನು ಅತಿಕ್ರಮಣದ ಕುರಿತು ಕ್ರಮ, ಪ್ರತಿಯೊಂದು ಕೌನ್ಸಿಲರ್ ಗೆ 25 ಎಲ್ ಇಡಿ ಬೀದಿ ದೀಪಗಳು , 125 ಮನೆಗಳ ಡೋರ್ ನಂಬರ್ ರದ್ದುಗೊಳಿಸುವಿಕೆ ಮಾಡದೇ ಹಿಂದಿನಂತೆಯೇ ಮುಂದುವರಿಸಲಾಗುವುದು ಎಂದರು.
ವಾರ್ಡ್ 11 ರ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್ ಮಾತನಾಡಿ, ಕಳೆದ 30 ವರ್ಷಗಳಿಂದ ಮನೆ ಕಟ್ಟಿ ನೆಲೆಸಿರುವ 120 ಮನೆಮಂದಿ ಸಂಕಷ್ಟದಲ್ಲಿದ್ದಾರೆ. ಮನೆ ಕಟ್ಟಿರುವ ಭೂಮಿಯ ಒಡೆಯ ಬೇರೆಯವರಾಗಿದ್ದು, ಆರ್ ಟಿಸಿ ಎಲ್ಲವೂ ಅವರ ಹೆಸರಿನಲ್ಲಿದೆ. ಮೋಸದಲ್ಲಿ ಭೂಮಿಯನ್ನು ಅಷ್ಟೂ ಮನೆಮಂದಿಗೆ ಮಾರಾಟ ಮಾಡಲಾಗಿದೆ. ಇದೀಗ ಬಿಲ್ಡರ್ ಓರ್ವರು ಖಾಸಗಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ 120 ಮನೆಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಡೋರ್ ನಂಬರ್ ರದ್ದುಗೊಳಿಸಲು ಬಂದಿರುವ ಆದೇಶವನ್ನು ಗ್ರಾ.ಪಂ ನ್ಯಾಯಾಲಯದ ತೀರ್ಪಿಗೆ ಬಿಟ್ಟಂತೆ, ಈ ಬಾರಿಯೂ 120 ಮನೆಮಂದಿಗೆ ತೊಂದರೆಯಾಗದಂತೆ ಅದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬಡ ಅರ್ಹ ಫಲಾನುಭವಿಗಳಿಗೆ ಕೋಟೆಕಾರು ಪ.ಪಂ ವ್ಯಾಪ್ತಿಯಲ್ಲಿರುವ 80 ಎಕರೆ ಜಮೀನಿನಲ್ಲಿ ನಿವೇಶನ ನೀಡಬೇಕಿದೆ. ಇಲವಾದಲ್ಲಿ ಸರಕಾರಿ ಭೂಮಿಯನ್ನು ಭುಮಾಫಿಯಾದವರು ಮಾರುವ ಭೀತಿಯಿದೆ. ತನ್ನ ವಾರ್ಡು 11 ರ ಸರ್ವೆ ನಂಬರ್ 222,226,222 ರಲ್ಲಿ 12 ಎಕರೆ ಸರಕಾರಿ ಜಮೀನು ಇದೆ. ಕ್ರೀಡಾಂಗಣ ಮತ್ತು ಬಯಲು ರಂಗ ಮಂಟಪಕ್ಕೆ ಅದನ್ನು ಮೀಸಲಿಡಬೇಕು. ಈ ಕುರಿತು ಎರಡು ವರ್ಷಗಳ ಹಿಂದೆ ಮನವಿ ಸಲ್ಲಿಸಿದ್ದೇನೆ. ಮುಖ್ಯಾಧಿಕಾರಿ ನಿರ್ಣಯ ನಡೆಸಿ ತಹಶೀಲ್ದಾರ್ ಅವರಿಗೆ ಕಳುಹಿಸಿದರೂ ಈವರೆಗೆ ಸ್ಪಂಧನೆ ಸಿಕ್ಕಿಲ್ಲ. ಕ್ರೀಡಾಂಗಣ, ಬಯಲುರಂಗಮಂದಿರದ ನಿರ್ಮಾಣದ ಮೂಲಕ ಸರ್ವೆ ನಂಬರ್ 226-2ಎ ರಲ್ಲಿ 65 ವರ್ಷಗಳಿಂದ ವಾಸಿಸುತ್ತಿರುವ 8 ಮನೆಗಳ ಮೂಲಭೂತ ಸೌಕರ್ಯಗಳಲ್ಲೊಂದಾದ ದಾರಿ ವ್ಯವಸ್ಥೆಯೂ ಸರಿಯಾಗಲಿದೆ. ಪಟ್ಟಣ ಪಂಚಾಯತ್ ಉದ್ದಕ್ಕೂ ಸರಕಾರಿ ಜಮೀನು ಸರ್ವೆ ನಡೆಸಿ ಗಡಿಗುರುತು ನಡೆಸಬೇಕಿದೆ ಎಂದರು.
ಕೌನ್ಸಿಲರ್ ಅಹಮ್ಮದ್ ಬಾವಾ ಕೋಟೆಕಾರು ಮಾತನಾಡಿ, ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಕಳೆದ 30 ವರ್ಷಗಳಿಂದ ವಸತಿ ರಹಿತರು ಬಾಡಿಗೆ ಮನೆಯಲ್ಲಿ ನೆಲೆಸಿದ್ದರೂ, ನಿವೇಶನ ನೀಡುವ ವ್ಯವಸ್ಥೆಗಳಾಗುತ್ತಿಲ್ಲ. ಮೂರು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಕ್ರೀಡಾಂಗಣವೇ ಇಲ್ಲ. ಈ ನಡುವೆ 14ನೇ ವಾರ್ಡು ನಡುಕುಮೇರು ಎಂಬಲ್ಲಿ ಪಾರ್ಕ್ ಮತ್ತು ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಜಾಗ ಮೀಸಲಿಟ್ಟಿರುವುದು ಸಮಂಜಸವಲ್ಲ. ಅದನ್ನು ರದ್ದುಪಡಿಸಿ ವಸತಿ ರಹಿತರಿಗೆ 2.5 ಸೆಂಟ್ಸ್ ನಂತೆ ಜಾಗ ನೀಡಿ ವಸತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದು ಮಾನವೀಯತೆ. ಪಟ್ಟಣ ಪಂಚಾಯತ್ ನ ಹೆಚ್ಚಿನ ಕಡೆ ಈಗಲೂ ತಾತ್ಕಾಲಿಕ ವಿದ್ಯುತ್ ಕನೆಕ್ಷನ್ನಿನಡಿ ದಾರಿದೀಪ, ನೀರು ಪಂಪ್ ಚಲಿಸುತ್ತಿದೆ. ಇದರಿಂದ ಮೆಸ್ಕಾಂ ಗೆ ದುಬಾರಿ ಬಿಲ್ ಪಟ್ಟಣ ಪಂಚಾಯತ್ ಖಜಾನೆಯಿಂದ ಪಾವತಿಸಬೇಕಿದೆ. ತುರ್ತಾಗಿ ಶಾಶ್ವತ ಕನೆಕ್ಷನ್ ನಿರ್ಮಿಸುವಂತೆ ಒತ್ತಾಯಿಸಿದರು. ಅಲ್ಲದೆ ದಾರಿದೀಪಗಳು ಸಮರ್ಪಕವಾಗಿಲ್ಲ. ದುಬಾರಿ ಬಿಲ್ ದಾರಿದೀಪಗಳಿಂದ ಬರುತ್ತಿರುವುದರಿಂದ ಎಲ್ ಇಡಿ ಬಲ್ಬ್ ಅಳವಡಿಸಿದಲ್ಲಿ ಕಡಿಮೆ ವೆಚ್ಛದಲ್ಲಿ ನಿರ್ವಹಣೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಕೌನ್ಸಿಲರ್ ಗೆ 25 ದಾರಿದೀಪಗಳನ್ನು ಅಳವಡಿಸುವ ನಿರ್ಣಯ ಕೈಗೊಳ್ಳಲಾಯಿತು.
ಕೌನ್ಸಿಲರ್ ಸುಜಿತ್ ಮಾಡೂರು ಮಾತನಾಡಿ, ಕೋಟೆಕಾರು ಪಟ್ಟಣ ಪಂಚಾಯತ್ ಕಚೇರಿಗೆ ಬರುವ ಗ್ರಾಮಸ್ಥರಿಗೆ ಮಧ್ಯಾಹ್ನದವರೆಗೂ ಪ್ರತಿಯೊಬ್ಬ ಅಧಿಕಾರಿಗಳು ಲಭ್ಯವಿರಬೇಕು. ಮಧ್ಯಾಹ್ನ ನಂತರ ಕಚೇರಿಯಿಂದ ಹೊರಹೋಗುವ ಕೆಲಸಗಳನ್ನು ನಿರ್ವಹಿಸಬೇಕು. ನಗರೋತ್ಥಾನ ಕಾಮಗಾರಿಗಳು ಬಾಕಿಯುಳಿದಿದ್ದು, ತ್ವರಿತಗತಿಯಲ್ಲಿ ನಿರ್ವಹಿಸಬೇಕಿದೆ. 10 ವರ್ಷಗಳ ಹಿಂದೆ ವಸತಿ ರಹಿತರು ಅರ್ಜಿ ಸಲ್ಲಿಸಿದರೂ ಈವರೆಗೆ ದೊರೆತಿಲ್ಲ, ಕಾನೂನು ತೊಡಕುಗಳು ಇದ್ದರೂ ಸರಿಪಡಿಸಿ ಸಿಗುವಂತೆ ಮಾಡಬೇಕು. ನೀರು ಬಿಡುವವರ ವೇತನ ಬಹಳಷ್ಟು ಕಡಿಮೆಯಿದ್ದು, ವೇತನ ಜಾಸ್ತಿಗೊಳಿಸಬೇಕು. ಪಂಚಾಯಿತಿಗೆ ಬರುವ ಪ್ರತಿಯೊಬ್ಬನ ಕೆಲಸಗಳನ್ನು ಕೈಗೊಳ್ಳಲು ಮುಂಚಿತವಾಗಿ ಕೆವೈಸಿ ಎಂಟ್ರಿ ನಡೆಸಿ ಟಪಾಲ್ ಎಂಟ್ರಿ ಮಾಡಬೇಕು. ಇದರಿಂದ ಬ್ರೋಕರ್ ಗಳ ಹಾವಳಿ ತಪ್ಪುತ್ತದೆ, ನಾಗರಿಕರೇ ಖುದ್ದಾಗಿ ಹೆಚ್ಚುಹಣ ಕಳೆದುಕೊಳ್ಳದೇ ತಮ್ಮ ಕೆಲಸಕಾರ್ಯಗಳನ್ನು ತ್ವರಿತವಾಗಿ ನಡೆಸಲು ಸಾಧ್ಯ. ಹಕ್ಕುಪತ್ರ ಅರ್ಹ ಬಡವರಿಗೆ ಸಿಗಬೇಕಿದೆ. ಆದರೆ ನಡುಕುಮೇರು ಜಂಕ್ಷನ್ ಸಮೀಪ ಹಕ್ಕುಪತ್ರಗಳನ್ನು ಪಡೆದು ದುರ್ಬಳಕೆ ಮಾಡಲಾಗಿದೆ. ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ನೀಡಿರುವ ಕುರಿತು ಪ.ಪಂ ಆಡಳಿತ ನೋಟೀಸು ನೀಡಿದರೂ ಈವರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಪೌರಕಾರ್ಮಿಕರು ಸರಿಯಾಗಿ ತ್ಯಾಜ್ಯ ವಿಲೇವಾರಿ ನಡೆಸುತ್ತಿಲ್ಲ. ಕೌನ್ಸಿಲರ್ ಗಳ ಜೊತೆಗೆ ಉಡಾಫೆ ಮಾತನಾಡುವವರು ಸಾಮಾನ್ಯ ಜನರೊಂದಿಗೆ ಹೇಗೆ ವರ್ತಿಸುತ್ತಾರೆ?. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಿದೆ. ಹುಲ್ಲು ಕತ್ತರಿಸಲು ಯಂತ್ರಗಳನ್ನು ಖರೀದಿಸಲಾಗಿದೆ. ಆದರೆ 10 ಮಂದಿ ಪೌರಕಾರ್ಮಿಕರಿಂದ ಹುಲ್ಲು ಕತ್ತರಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ 10 ಲಕ್ಷ ಟೆಂಡರ್ ನಡೆಸಿ ಹುಲ್ಲು ಕತ್ತರಿಸಲಾಗುತ್ತಿದೆ. ಟೆಂಡರ್ ಪಡಕೊಂಡವರು ಕೇವಲ ಮೂರು ತಿಂಗಳು ಮಾತ್ರ ಕೆಲಸ ನಿರ್ವಹಿಸುತ್ತಾರೆ. ಇದರಿಂದ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿದಲ್ಲಿ ಸ್ವಂತ ಹುಲ್ಲು ಕತ್ತರಿಸುವ ಯಂತ್ರವನ್ನು ಅವರ ಮೂಲಕವೇ ಉಪಯೋಗಿಸಬಹುದು. ವರ್ಷವಿಡೀ ಹುಲ್ಲು ಕತ್ತರಿಸಲು ಸಾಧ್ಯ, ಟೆಂಡರ್ ಹಣವೂ ಉಳಿತಾಯವಾಗುವುದು.
ವಾರ್ಡ್ ನಂಬರ್ 8ರ ಕೌನ್ಸಿಲರ್ ಅಹಮ್ಮದ್ ಇಸಾಕ್ ಜಿ.ಐ , ಕಾಲುಸಂಕ , ಕಿಂಡಿ ಅಣೆಕಟ್ಟುಗಳ ಸಮೀಪ ಹೊರಗಿನವರು ಬಂದು ತ್ಯಾಜ್ಯವನ್ನು ಎಸೆದು ನಾಪತ್ತೆಯಾಗುತ್ತಿದ್ದಾರೆ. ತನ್ನ ವಾರ್ಡ್ ಸೋಮೇಶ್ವರ-ಕೋಟೆಕಾರು ಗ್ರಾಮದ ಗಡಿಪ್ರದೇಶವಾಗಿರುವುದರಿಂದ ಹೊರಗಿನಿಂದ ಬರುವವರು ತ್ಯಾಜ್ಯ ಎಸೆಯುವ ಸಂಶಯವೂ ಇದೆ. ಇದನ್ನು ಪ.ಪಂ ಆಡಳಿತ ಗಂಭೀರವಾಗಿ ಪರಿಗಣಿಸಿ ಸಿ.ಸಿ ಕ್ಯಾಮರಾ ಅಳವಡಿಸಬೇಕಿದೆ. ಈ ಮೂಲಕ ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದರು.
ಕೌನ್ಸಿಲರ್ ಧೀರಜ್ ಕುಸಾಲ್ ನಗರ ಮಾತನಾಡಿ, ಮಾಡೂರು ಹಿಂದೂ ರುದ್ರಭೂಮಿಯಲ್ಲಿ ಸಮಯ ನಿಗದಿಪಡಿಸಬೇಕಿದೆ. ಸ್ಥಳೀಯ ಜನವಸತಿ ಪ್ರದೇಶವಾಗಿರುವುದರಿಂದ ರಾತ್ರಿ ಅಂತಿಮ ಸಂಸ್ಕಾರ ನಡೆಸುವಾಗ ದೂರುಗಳು ಕೇಳಿಬರುತ್ತಿವೆ. ಆದರೆ ಹಿಂದೂ ರುದ್ರಭೂಮಿ ಇರುವಾಗ ಮನೆಗಳ ಸಂಖ್ಯೆ ಕಡಿಮೆಯಿತ್ತು, ಇದೀಗ ಹೆಚ್ಚಾಗಿವೆ. ಈ ಬಗ್ಗೆ ಹಿಂದೂ ರುದ್ರಭೂಮಿ ಸಮಿತಿಯವರಲ್ಲಿ ಪಂಚಾಯಿತಿ ಆಡಳಿತ ವರದಿ ಕೇಳಬೇಕು. ಆಡಳಿತ ವ್ಯವಸ್ಥೆ ಸುಧಾರಣೆ ನಡೆಸುವ ಕುರಿತು ಪ್ರಸ್ತಾಪ ನಡೆಸಿದರು. ಪ.ಪಂ ಕೌನ್ಸಿಲರುಗಳಿಗೆ ಈವರೆಗೆ ಗುರುತಿನ ಚೀಟಿಯನ್ನು ನೀಡಲಾಗಿಲ್ಲ. ಇದರಿಂದಾಗಿ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲರೂ ಕಷ್ಟಪಡುವಂತಾಯಿತು. ಕೌನ್ಸಿಲರುಗಳ ಪಾಸ್ ಬುಕ್ ನ್ನು ಪಡೆದುಕೊಳ್ಳಲಾಗಿಲ್ಲ. ಗೌರವ ಧನ ಪಾವತಿಯೂ ಸಾಧ್ಯವಾಗಿಲ್ಲ. ಪಟ್ಟಣ ಪಂಚಾಯತ್ ನ ಟೆಂಡರ್ ನಿಂದ ಹಿಡಿದು ನಡೆಯುವ ಪ್ರತಿಯೊಂದು ಪ್ರಕ್ರಿಯೆಗಳು ಕೌನ್ಸಿಲರುಗಳ ಗಮನಕ್ಕೆ ತನ್ನಿ ಎಂದು ಒತ್ತಾಯಿಸಿದರು.
13 ನೇ ವಾರ್ಡಿನ ಎಸ್ ಡಿಪಿಐನ ಕೌನ್ಸಿಲರ್ ಸೆಲೀಮಾಬಿ ಮತ್ತು ನಾಮನಿರ್ದೇಶಿತ ಸದಸ್ಯೆ ಕಾಂಗ್ರೆಸ್ಸಿನ ಸಫಿಯಾ ಇಬ್ಬರ ನಡುವೆ ಗೃಹಲಕ್ಷ್ಮೀ ಯೋಜನೆ ಮತ್ತು ಅಂಗನವಾಡಿ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆಯಿತು. ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿ ನಡೆದ ವಾಗ್ವಾದ ವೈಯಕ್ತಿಕ ಹಂತಕ್ಕೆ ತಲುಪಿತ್ತು. ಅಧ್ಯಕ್ಷರ ಸಾಮಧಾನಕರ ಮಾತುಗಳಿಂದ ಸಾಮಾನ್ಯ ಸಭೆಯಲ್ಲಿ ರಾಜಕೀಯ ತರುವುದು ಸಮಂಜಸವಲ್ಲ ಅನ್ನುವ ವಿಚಾರದಲ್ಲಿ ಇಬ್ಬರ ವಾಗ್ವಾದದ ಮುಕ್ತಾಯದ ಜೊತೆಗೆ ಸಭೆಯೂ ಮುಕ್ತಾಯಗೊಂಡಿತು.
ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ ಉಪಸ್ಥಿತರಿದ್ದರು.
ಅಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ಭಾಗಿಯಾಗಬೇಕೆಂದೇನಿಲ್ಲ !
ಗ್ರಾಮಕರಣಿಕ ನವ್ಯಾ ಅವರು ಸಭೆಯ ನಡುವೆ ಮಾತನಾಡಿ,ಸಾಮಾನ್ಯ ಸಭೆಗಳಲ್ಲಿ ಅಧಿಕಾರಿಗಳ ಭಾಗಿ ಕಡ್ಡಾಯವೇನಲ್ಲ. ಎಲ್ಲಿಯೂ ಕಾನೂನಿನಲ್ಲಿ ಇಲ್ಲ. ಇದಕ್ಕೆ ಕೌನ್ಸಿಲರ್ ಸುಜಿತ್ ಪ್ರತಿಕ್ರಿಯಿಸಿ ಕೋಟೆಕಾರು ಪ.ಪಂ ಸಾಮಾನ್ಯ ಸಭೆ 3 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿದೆ. ಬಹುತೇಕ ಕೌನ್ಸಿಲರುಗಳಿಗೆ ಕಂದಾಯ ಇಲಾಖೆಯ ಮಾಹಿತಿಗಳಲ್ಲಿ ಗೊಂದಲವಿರುವುದರಿಂದ ಗ್ರಾಮಕರಣಿಕರ ಉಪಸ್ಥಿತಿ ಅಗತ್ಯ ಇರಬೇಕು. ಅಲ್ಲದೆ ಕೋಟೆಕಾರು ಗ್ರಾಮ ಕರಣಿಕರಾಗಿರುವುದರಿಂದ ಉಪಸ್ಥಿತಿ ಅವ್ಯಶ್ಯವಾಗಿರಬೇಕು. ಹಾಗೆಂದು ಕಾನೂನು ಇದ್ದಲ್ಲಿ ಮುಖ್ಯಾಧಿಕಾರಿಯವರಲ್ಲಿ ಲಿಖಿತ ರೂಪದಲ್ಲಿ ತಿಳಿಸಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಗೊಂದಲಗಳಿದ್ದಲ್ಲಿ ಎಲ್ಲವನ್ನೂ ಪರಿಹರಿಸುತ್ತೇನೆ. ಹಿರಿಯ ಅಧಿಕಾರಿಗಳು ಸಭೆ ಕರೆದಿರುವುದರಿಂದ 128 ಕಡತಗಳನ್ನು ಸಿದ್ಧಪಡಿಸಬೇಕಿದೆ. ಅದಕ್ಕಾಗಿ ಸಭೆಯಿಂದ ನಿರ್ಗಮಿಸುವುದು ಅನಿವಾರ್ಯ ಎಂದಿದ್ದಾರೆ.