


ಹರೇಕಳ : ಆಧುನಿಕತೆಯ ಭರಾಟೆಯಲ್ಲಿ ಪ್ರತಿಯೊಬ್ಬರು ತಮ್ಮ ಕೆಲಸ ಕಾರ್ಯಗಳಲ್ಲಿ ಪ್ರತಿದಿನ ಒತ್ತಡದಿಂದ ಕಾಲ ಕಳೆಯುತ್ತಾರೆ. ಆದರೆ ದೈಹಿಕವಾಗಿ ನಾವು ಸಶಕ್ತನಾಗಿದ್ದರೆ ಮಾತ್ರ ಜೀವನದಲ್ಲಿ ಯಾವುದನ್ನು ಕೂಡ ಅನುಭವಿಸಲು ಸಾಧ್ಯ. ಆರೋಗ್ಯವೇ ಹದಗೆಟ್ಟರೇ ನಿತ್ಯ ಕರ್ಮಗಳನ್ನು ಕೂಡ ನಮ್ಮಿಂದ ನಿರ್ವಹಿಸಲು ಅಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗಿಗಳಾಗುವುದರೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಸಾಮಾಜಿಕ ಧಾರ್ಮಿಕ ಮುಂದಾಳು ಚಿತ್ರಂಜನ್ ಮಾಡ ಅಭಿಪ್ರಾಯ ಪಟ್ಟರು.
ಅವರು ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾವೂರು ಹರೇಕಳ ಇವುಗಳ ಸಂಯುಕ್ತ ಆಶಯದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ – ಕ್ರೀಡಾ ಚಿಲುಮೆಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟದ ಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ಇಸ್ಮಾಯಿಲ್ ಶಾಫಿ ಅವರು ಹರೇಕಳ ವಿದ್ಯಾ ಸಂಸ್ಥೆಯು ಉಳ್ಳಾಲ ಭಾಗದಲ್ಲಿ ಹಲವು ವರ್ಷಗಳ ಇತಿಹಾಸವನ್ನು ಹೊಂದಿದ ಕನ್ನಡ ಮಾಧ್ಯಮ ಶಾಲೆಯಾಗಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಾಗಿ,ವೈದ್ಯಾಧಿ ಕಾರಿಗಳಾಗಿ, ನ್ಯಾಯಧೀಶರಾಗಿ, ಇಂಜಿನಿಯರ್ ಹೀಗೆ ಹತ್ತು ಹಲವು ವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ರಾಜಕೀಯ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವ ಮುಖೇನ ನಮ್ಮ ಜಿಲ್ಲೆಯಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡಿದ್ದಾರೆ. ನನ್ನ ಸಾಮಾಜಿಕ ಶೈಕ್ಷಣಿಕ ಸೇವೆಗೂ ಈ ಶಾಲೆಯೇ ಪ್ರೇರಣೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಕಡೆಂಜ ಸೋಮಶೇಖರ ಚೌಟ ವಹಿಸಿದ್ದರು. ಕೊಣಾಜೆ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ವಿನೋದ್ ಕುಮಾರ್ ಅವರು ಗೌರವ ವಂದನೆಯನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಉಪನಿರೀಕ್ಷಕರು ವಿನೋದ್ ಕುಮಾರ್, ಸಮಾಜ ಸೇವಕರಾದ ಇಸ್ಮಾಯಿಲ್ ಶಾಫಿ, ಚಿತ್ತರಂಜನ್ ಮಾಡ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ವಿವಿಧ ಕ್ರೀಡಾಕೂಟದಲ್ಲಿ, ಪಂದ್ಯಾಟಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಜಯರಾಮ ಆಳ್ವ ಪೋಡಾರು, ಸದಸ್ಯರಾದ ದುರ್ಗಪ್ರಸಾದ್ ರೈ ಕಲ್ಲಾಯಿ ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾಲಾತ ಸರ್ವರನ್ನು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ರಾಧಾಕೃಷ್ಣ ರೈ ವಂದಿಸಿದರು. ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ರವಿಶಂಕರ್, ಕೃಷ್ಣ ಶಾಸ್ತ್ರೀ, ಕುಮುದ ದೇವಿ ಶಿವಣ್ಣ, ಸ್ಮಿತಾ, ಸುಮಲತಾ, ಉಷಾಲತಾ, ಪ್ರೇಮಲತಾ, ಸುಗುಣ, ನಾಗೇಂದ್ರ, ಪ್ರಶ್ಮ ಮುಂತಾದವರು ಸಹಕರಿಸಿದರು.