
ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ. ವಾರದ ಹಿಂದಷ್ಟೇ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಎನ್‌ಐಎ ತನಿಖೆಗೆ ವಹಿಸಿ ಆದೇಶ ಮಾಡಿತ್ತು.


ಮಂಗಳೂರು, ಜೂನ್ 14: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ. ವಾರದ ಹಿಂದಷ್ಟೇ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಎನ್‌ಐಎ ತನಿಖೆಗೆ ವಹಿಸಿ ಆದೇಶ ಮಾಡಿತ್ತು.ಬೆಂಗಳೂರು ಎನ್‌ಐಎ ಘಟಕದ ಅಧಿಕಾರಿಗಳು ಮಂಗಳೂರಿಗೆ ಬಂದಿದ್ದು ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಇಬ್ಬರು ಇನ್ಸ್ ಪೆಕ್ಟರ್ ಮತ್ತು ಸಿಬಂದಿಯುಳ್ಳ ಅಧಿಕಾರಿಗಳ ತಂಡ ಮಂಗಳೂರಿಗೆ ಬಂದಿದೆ. ಮಂಗಳೂರು ಸಿಸಿಬಿ ಮತ್ತು ಇತರ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆ ಪಿಎಫ್‌ಐ ಕಾರ್ಯಕರ್ತರು ಶಾಮೀಲಾಗಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಎನ್‌ಐಎ ತನಿಖೆಗೆ ವಹಿಸಿತ್ತು. ಹಿಂದು ಸಂಘಟನೆ ನಾಯಕರು ಸುಹಾಸ್ ಶೆಟ್ಟಿ ಹತ್ಯೆಯನ್ನು ಎನ್‌ಐಎ ತನಿಖೆಗೆ ಒತ್ತಾಯ ಮಾಡಿದ್ದರಿಂದ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದು ಗಮನ ಸೆಳೆದಿದ್ದರು.ನಿನ್ನೆಯಷ್ಟೆ ಮಂಗಳೂರು ಬಂದಿದ್ದ ರಾಜ್ಯದ ಗೃಹ ಸಚಿವ ಪರಮೇಶ್ವರ್, ಎನ್‌ಐಎ ತನಿಖೆಗೆ ಕೊಟ್ಟಿದ್ದಾರೆ, ಅವರಿಗೆ ಪವರ್ ಇದೆ, ತನಿಖೆ ಮಾಡುತ್ತಾರೆ, ನಾವು ಹಸ್ತಕ್ಷೇಪ ಮಾಡುವುದಿಲ್ಲ. ಒಂದು ಪ್ರಕರಣ ಮಾತ್ರ ಯಾಕೆ ಎನ್‌ಐಎ ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದಿದ್ದರು. ಸುಹಾಸ್ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಎನ್‌ಐಎ ತನಿಖೆ ಸಲುವಾಗಿ ಮಂಗಳೂರು ಪೊಲೀಸರು ಸುಹಾಸ್ ಹತ್ಯೆ ಪ್ರಕರಣದ ಎಲ್ಲ ಕಡತಗಳನ್ನು ಅವರಿಗೆ ಹಸ್ತಾಂತರ ಮಾಡಬೇಕಾಗುತ್ತದೆ.