ಕುಂಪಲ: ಧಾರ್ಮಿಕತೆಯ ಅಡಿಪಾಯದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಶಕ್ತಿಯುತ ಕಾರ್ಯವನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಮಾಡಿದೆ, ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಯಶಸ್ಸು ಖಂಡಿತ ಸಾಧ್ಯ ಅದಕ್ಕೆ ಮಂದಿರವನ್ನು ಸ್ಥಾಪಿಸಿದ ಸತೀಶ್ ಕುಂಪಲರೇ ಇಲ್ಲಿ ಉದಾಹರಣೆ. ಶ್ರೀಕೃಷ್ಣ ನ ಸಾರ್ವಕಾಲಿಕ ಸಂದೇಶಗಳು ಹಿಂದೂ ಸಮಾಜಕ್ಕೆ ಶ್ರೀರಕ್ಷೆಯಾಗಲಿ ಎಂದು ದ.ಕ ಜಿಲ್ಲಾ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆದ ವಿಜೃಂಭಣೆಯ ಕುಂಪಲಾಷ್ಟಮಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರಬದಲ್ಲಿ ಮಂದಿರದ ಪರವಾಗಿ ಸಂಸದರನ್ನು ಸನ್ಮಾನಿಸಲಾಯಿತು. ಕುಂಪಲ ಎಂಬ ಗ್ರಾಮೀಣ ಪ್ರದೇಶವು ಇಂದು ಜಿಲ್ಲೆಯಾದ್ಯಂತ ಪ್ರಸಿದ್ದಿಗೆ ಬರಲು ಕುಂಪಲ ಶ್ರೀ ಬಾಲಕೃಷ್ಣ ಮಂದಿರವೇ ಪ್ರೇರಣೆ, ಕುಂಪಲಾಷ್ಟಮಿ ನಾಡಹಬ್ಬದ ಮೂಲಕ ಊರಿನ 30 ಕ್ಕೂ ಅಧಿಕ ಸಂಘ ಸಂಸ್ಥೆಗಳು ಒಟ್ಟಾಗಿ ಊರಿನ ಉತ್ಸವದ ಯಶಸ್ಸಿನಲ್ಲಿ 27 ವರ್ಷಗಳಿಂದ ಕೈಜೋಡಿಸಿದೆ ಈ ಮೂಲಕ ಹಿಂದೂ ಸಮಾಜ ಒಗ್ಗಟ್ಟಿಗೆ ಬುನಾದಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು, ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ ಪ್ರಸ್ತಾವಿಕವಾಗಿ ಮಾತನಾಡಿದರು.
ಅನಿವಾಸಿ ಭಾರತೀಯ ಮಸ್ಕತ್ ನ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನಮನೆ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಮಾಜಿ ಮೇಯರ್, ಮ.ನ.ಪಾ ಸದಸ್ಯ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಮುಖರಾದ ಸಂಜಯ ಪ್ರಭು, ಮುರಳಿ ಕಡಬ, ವಸಂತ್ ಜೆ ಪೂಜಾರಿ, ತುಳು ಚಲನಚಿತ್ರ ನಟ ವಿನೀತ್, ನಿರ್ದೇಶಕ ರಾಹುಲ್ ಅಮೀನ್, ನಟಿ ಚೈತ್ರಾ ಶೆಟ್ಟಿ, ಹಿರಿಯರಾದ ಸೀತರಾಮ ಬಂಗೇರ ಆಗಮಿಸಿದ್ದರು. ಈ ಸಂದರ್ಬದಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಮೀಳ ಪ್ರವೀಣ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ ನಿರೂಪಿಸಿದರು, ಸಾಂಸ್ಕೃತಿಕ ಸಂಚಾಲಕ ಜಗದೀಶ್ ಆಚಾರ್ಯ ವಂದಿಸಿದರು. ಬಳಿಕ ವಿವಿದ ಸಂಘ ಸಂಸ್ಥೆಗಳಿಂದ ಕೂಡಿದ ದೃಶ್ಯ ರೂಪಕ, ಸ್ತಬ್ದ ಚಿತ್ರ, ವೇಷ ಭೂಷಣ, ಬ್ಯಾಂಡ್, ಚೆಂಡೆವಾದನ, ಕೀಳು ಕುದುರೆ, ಕರಗ ನೃತ್ಯದೊಂದಿಗೆ ಶ್ರೀ ಕೃಷ್ಣ ದೇವರ ಶೋಭಯಾತ್ರೆ ನಡೆಯಿತು.