
ಉಳ್ಳಾಲ: ಯುವಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಹೆಚ್ಚು ಮಾಡುವುದರ ಜೊತೆಗೆ ಅಂಗಾಂಗಳ ಸುರಕ್ಷತೆ, ಕೌಶಲ್ಯ ವೃದ್ಧಿ, ಪ್ರಗತಿಪರ ಜ್ಞಾನ ಹಾಗೂ ಮೌಲ್ಯಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಈ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಿದ್ದು, ವ್ಯಾಯಾಮ ಶಾಲೆಯೂ ಅದೇ ಮಾದರಿಯಲ್ಲಿ ಕಾರ್ಯಾಚರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜನಪದ ವಿದ್ವಾಂಸ ರಾಜ್ಯ ನಿಕಟಪೂರ್ವ ಎನ್ ಎಸ್ ಎಸ್ ಅಧಿಕಾರಿ, ಬೆಂಗಳೂರು ಸರಕಾರದ ಜಂಟಿ ಕಾರ್ಯದರ್ಶಿ ಡಾ| ಗಣನಾಥ ಎಕ್ಕಾರು, ಅಭಿಪ್ರಾಯಪಟ್ಟರು.
ಅವರು ಮುನ್ನೂರು ಕುತ್ತಾರಿನ ವಿಷ್ಣುಮೂರ್ತಿ ದೈವಸ್ಥಾನದ ಬಳಿ ಜರಗಿದ ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಇದರ 39ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.


ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಸೌಹಾರ್ದಯುತ ಚಟುವಟಿಕೆಗಳನ್ನೇ ಹಮ್ಮಿಕೊಳ್ಳುವ ಮೂಲಕ ಭಾರತದ ಸಂವಿಧಾನದ ಆಶಯಕ್ಕೆ ತಕ್ಕಂತೆ ಯುವಕರು ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ವಿಚಾರ. ಪ್ರಸ್ತುತ ಸಮಾಜದಲ್ಲಿ ಹೊಸ ರೀತಿಯ ಯೋಚನಾ ಕ್ರಮ, ಚಿಂತನೆಗಳು, ಚಟುವಟಿಕೆಗಳು ಮುಖ್ಯವಾಗಿರುತ್ತದೆ ಯುವಕರ ವ್ಯಕ್ತಿತ್ವ ವಿಕಸನ ಬಹುಮುಖ್ಯ ವಿಚಾರವಾಗಿದೆ. ಯುವಕರ ಶಕ್ತಿಯ ಅರಿವನ್ನು ಉಂಟು ಮಾಡಿದಾಗ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಕುಟುಂಬ,ಸಮಾಜ, ದೇಶವೂ ವಿಕಸನಗೊಳ್ಳುವುದು. ವ್ಯಾಯಾಮ ಆರೋಗ್ಯದ ಸಂಕೇತ ದೇಹದ ಪ್ರತಿಯೊಂದು ಅಂಗಾಂಗಳು ಮುಖ್ಯ ಹುಟ್ಟಿನಿಂದ ಸಾಯುವವರೆಗೂ ಪ್ರತಿ ಅಂಗಾಂಗಳನ್ನು ಸುರಕ್ಷತವಾಗಿರುಸುವಿಕೆ, ಕೌಶಲ್ಯ ವೃದ್ಧಿ ಜ್ಞಾನ ವೃದ್ಧಿ , ಪ್ರಗತಿಪರ ಜ್ಞಾನದ ಜೊತೆಗೆ ಮೌಲ್ಯವನ್ನು ಕಟ್ಟುವ ಕೆಲಸಗಳು ಆಗಬೇಕಿದೆ. ಧರ್ಮ ಜಾತಿ ವಿಘಟನೆ ಹೆಚ್ಚಿರುವ ಸಂದರ್ಭದಲ್ಲಿ ಸಾಂವಿಧಾನಿಕ ಮೌಲ್ಯ ಹೆಚ್ಚಾಗಬೇಕಿದೆ. ಇದನ್ನು ಯುವಕರ ಮನಸ್ಸಲ್ಲಿ ಬಿತ್ತುವ ಕಾರ್ಯಗಳಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುತ್ತಾರು ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಹರೀಶ್ ಮುಂಡೋಳಿ ವಹಿಸಿದ್ದರು. ಡಾ.ಕೆ.ಎಸ್ ಭಟ್, ಭರತ್ ರಾಜ್ ಮುಂಡೋಳಿ, ಕುಂಬಾರ ಗುಡಿಕೈಗಾರಿಕಾ ಸಂಘ ಕುಳಾಯಿ ನಿರ್ದೇಶಕ ಶೇಖರ್ ಆಯರ್ ಬೆಟ್ಟು ಕುತ್ತಾರ್, ಜೈ ಹನುಮಾನ್ ಕ್ರೀಡಾ ಮಂಡಳಿ ಮಹಿಳಾ ಸಮಿತಿ ಕುತ್ತಾರು ಬಟ್ಟೆದಡಿಯ ಅಧ್ಯಕ್ಷೆ ಸುಮಿತ್ರಾ ಕುಂದರ್ , ಸೌಹಾರ್ದ ಕಲಾವಿದರು ಕುತ್ತಾರು ಇಲ್ಲಿನ ನಿರ್ದೇಶಕ ಮಿಥುನ್ ರಾಜ್ ಕಂಪ , ದ.ಕ ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪಿ.ಎ ಕಾಲೇಜು ಆಹಾರ ವಿಭಾಗ ಮುಖ್ಯಸ್ಥೆ ಆಶಾ ಸ್ವೀಕೃತ್, ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಅಧ್ಯಕ್ಷ ಜಯರಾಮ್ ಕುತ್ತಾರ್ ಉಪಸ್ಥಿತರಿದ್ದರು.
ಸುನಿಲ್ ತೇವುಲ ಸ್ವಾಗತಿಸಿದರು. ಸ್ವೀಕೃತ್ ಕೆ. ವರದಿ ವಾಚಿಸಿದರು ಸುರೇಶ್ ವಂದಿಸಿದರು