ಉಳ್ಳಾಲ: ಯುವಸಮುದಾಯ ಸೆಲ್ಫೀ ತೆಗೆದುಕೊಂಡು ಸ್ವಾರ್ಥಯುತ ಮನೋಭಾವದೊಂದಿಗೆ ಜೀವಿಸುತ್ತಿದ್ದಾರೆ, ಅದನ್ನು ಬದಲಾಯಿಸಲು ಎಳೆಯ ಹರೆಯದಲ್ಲೇ ಸಮಾಜದ ಆಗುಹೋಗುಗಳ ತಿಳುವಳಿಕೆ, ವೆನ್ಲಾಕ್ ಆಸ್ಪತ್ರೆಯಲ್ಲಿರುವ ರೋಗಿಗಳ ದರ್ಶನ ಮಾಡಿಸಿದಾಗ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಅವರು ಉಳ್ಳಾಲ ಅಲೇಕಳದ ಮದನಿ ಎಜ್ಯುಕೇಷನಲ್ ಅಸೋಸಿಯೇಷನ್ ಇದರ 50ನೇ ವರ್ಷದ ಸುವರ್ಣ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ನೂತನ ಕಾಲೇಜು ಮತ್ತು ವೈಜ್ಞಾನಿಕ ಪ್ರಯೋಗಾಲಯ ಕಟ್ಟಡದ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಕಷ್ಟಕರ ವಿಚಾರಗಳು ಮನಸ್ಸಿಗೆ ಪರಿಚಯವಾದಾಗ ಮಕ್ಕಳು ಎಂದಿಗೂ ದಾರಿತಪ್ಪಲು ಸಾಧ್ಯವಿಲ್ಲ. ವೆನ್ಲಾಕ್ ಆಸ್ಪತ್ರೆ, ಬಡ ವರ್ಗದವರ ಕಷ್ಟಗಳನ್ನು ಹೇಳಿಕೊಟ್ಟು ಅದನ್ನು ತಿಳಿಸಿದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ. ಮದನಿ ಎಜ್ಯುಕೇಷನಲ್ ಅಸೋಸಿಯೇಷನ್ ಮತ್ತು ಅಲ್ಯುಮ್ನಿ ಅಸೋಸಿಯೇಷನ್ ಮಹತ್ವದ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವ ಕಾರ್ಯ ಶ್ಲಾಘನೀಯ. ತನ್ನ ಕಡೆಯಿಂದ ರೂ.25 ಲಕ್ಷ ರೂ ವೆಚ್ಚದ ಸಹಾಯವನ್ನು ನಡೆಸುವಲ್ಲಿ ಶ್ರಮವಹಿಸುತ್ತೇನೆ ಎಂದ ಅವರು ಬಡವರು ಬಡವರಾಗಿಯೇ ಸಾಯದೇ, ಸ್ಥಿತಿವಂತರಾಗಿಯೇ ಬಾಳುವವರಾಗಿರಿ ಎಂದರು.
ಸುವರ್ಣ ಮಹೋತ್ಸವದ ಲಾಂಛನವನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸ ಕೊಟ್ಟು ಸಮಾಜಕ್ಕೆ ಒಲ್ಳೆಯ ಪ್ರಜೆಗಳನ್ನು ನೀಡಿದ ಸಂಸ್ಥೆಯ ಕಾರ್ಯ ಶ್ಲಾಘನೀಯ. ಪ್ರಾಮಾಣಿಕ, ವೈಜ್ಞಾನಿಕ,.ಸಾಮಾಜಿಕ, ಆರ್ಥಿಕ ವಾಗಿ ಸಬಲ ಸಮಾಜ ನಿರ್ಮಾಣವಾಗಬೇಕು. ಎಲ್ಲಾ ರೀತಿಯ ಜನರನ್ನು ಒಗ್ಗೂಡಿಸಿ ಶಾಲಾ ಶಿಕ್ಷಣದ ಜೊತೆಗೆ ಕೌಶಲ್ಯವರ್ಧಿತ ಜ್ಞಾನವನ್ನು ನೀಡಬೇಕಿದೆ. 50 ವರ್ಷಗಳ ಹಿಂದಿನ ಶಿಕ್ಷಣ ಸಂಸ್ಥೆಯ ಸಾಧನೆಗಳನ್ನು ನೆನಪಿಸುವ ಸಮಾರಂಭವಾಗಿದೆ. ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣ ಅನ್ನುವುದು ಸರಕಾರದ ಬದ್ಧತೆಯಾಗಿದೆ. ಬದಲಾವಣೆಯ ಪರ್ವ ಮದನಿ ಎಜ್ಯುಕೇಷನಲ್ ಅಸೋಸಿಯೇಷನ್ನಿನಿಂದ ಆರಂಭವಾಗಿದೆ. 800 ಮಕ್ಕಳು ವಿದ್ಯಾರ್ಜನೆ ನಡೆಸುವುದರಿಂದ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಮಾತನಾಡಿ, ಶಾಲಾ ಸ್ಥಾಪನೆಗೆ ಕಾರಣರಾದ ಅಂದಿನ ದರ್ಗಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಹಾಗೂ ಮಾಜಿ ಶಾಸಕ ದಿ| ಯು.ಟಿ.ಫರೀದ್ ಅವರ ಕಾರ್ಯಗಳನ್ನು ಜನತೆ ಮರೆಯುವಂತಿಲ್ಲ. ಎಲ್ಲಾ ವರ್ಗದವರೂ ಶಿಕ್ಷಣ ಪಡೆಯುವಂತಾಗಲಿ ಅನ್ನುವ ಮನೋಭಾವದ ಇಬ್ರಾಹಿಂ ಹಾಜಿ ಒಂದೆಡೆಯಾದರೆ, ತನ್ನ ಸ್ವಾರ್ಥಕ್ಕಾಗಿ ಇತರೆ ರಾಜಕಾರಣಿಗಳಂತೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಅವಕಾಶವಿದ್ದರೂ ಅದನ್ನು ಬಿಟ್ಟು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಜತೆಗೆ ನಿಂತು ಶಿಕ್ಷಣ ಸಂಸ್ಥೆಗಳನ್ನೇ ಸ್ಥಾಪಿಸಿದ ಯು.ಟಿ. ಫರೀದ್ ಅವರ ಆದರ್ಶಗಳನ್ನು ಮರೆಯುವಂತಿಲ್ಲ ಎಂದರು.
ಈ ಸಂದರ್ಭ ದರ್ಗಾ ಮಾಜಿ ಅಧ್ಯಕ್ಷ ರಶೀದ್, ಯು.ಎಸ್.ಹಂಝಾ, ಉಲ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಅಸೋಸಿಯೇಷನ್ ಕೋಶಾಧಿಕಾರಿ ಯು.ಪಿ.ಅರೆಬ್ಬಿ, ನೂರಾನಿ ಯತೀಂ ಖಾನ ಅಧ್ಯಕ್ಷ ಯು.ಎಸ್ ಅಬೂಬಕರ್, ಬ್ರೆöÊಟ್ ಮದನಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ತಾಹೀರ್ ತಂಙಳ್ , ಮಾಜಿ ಕರ್ಯದರ್ಶಿ ಆರ್.ಕೆ.ಯಾಕೂಬ್, ಕಣಚೂರು ಪ್ರಾಂಶುಪಾಲ ಯು.ಟಿ.ಇಕ್ಬಾಲ್, ಮದನಿ ಅಲ್ಯುಮಿನಿ ಅಸೋಸಿಯೇಷನ್ ಅಧ್ಯಕ್ಷ ಮುನೀರ್ ಬಾವಾ, ನಗರಸಭೆ ಸದಸ್ಯರುಗಳಾದ ಅಬ್ದುಲ್ ಜಬ್ಬಾರ್, ಅಸ್ಗರ್ ಆಲಿ, ಯು.ಎ.ಇಸ್ಮಾಯಿಲ್, ಅಸೋಸಿಯೇಷನ್ ಪ್ರ.ಕಾ ಅಬ್ದುಲ್ ಫತಾಕ್, ಸಂಚಾಲಕರು ಕೆ.ಮೊಹಮ್ಮದ್, ಜೊತೆ ಕರ್ಯದರ್ಶಿ ಯು.ಎನ್. ಇಕ್ಬಾಲ್, ಲೆಕ್ಕ ಪರಿಶೋಧಕ ಇಬ್ರಾಹಿಂ ಆಲಿಯಬ್ಬ , ಆಸೀಫ್ ಇಕ್ಬಾಲ್, ಅಸೋಸಿಯೇಷನ್ ಮಹಿಳಾ ವಿಭಾಗ ಅಧ್ಯಕ್ಷೆ ಝೊಹರಾ ಇಬ್ರಾಹಿಂ ಖಾಸಿಂ, ಉಮ್ಮರ್ ಫಾರುಕ್, ಯು.ಬಿ.ಅಬ್ಬಾಸ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಬ್ದುಲ್ ಅಝೀಝ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ವಾರ್ಷಿಕ ವರದಿ ವಾಚಿಸಿದರು. ಅಬ್ದುಲ್ ಫತಾಕ್ ವಂದಿಸಿದರು.