
ಉಳ್ಳಾಲ: ಊರಿನ ಹೆಮ್ಮೆ ಎನಿಸಿರುವ, ಪ್ರಧಾನ ಮಂತ್ರಿ ಪುರಸ್ಕಾರವನ್ನು ಪಡೆದ ಮೊಗವೀರ ಸಮಾಜದ ಬಾಲಕಿಯನ್ನು ಗೌರವಿಸುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯ. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ” ಎಂದು ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಹೆಚ್. ಎನ್ ಅಭಿಪ್ರಾಯಪಟ್ಟರು.
ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧಿಸಿ ಆವಿಷ್ಕಾರ ನಡೆಸಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ ಸಿಂಧೂರ ರಾಜಳಿಗೆ ಹುಟ್ಟೂರಿನ ಗೌರವ ಅಭಿನಂದನೆ ಹಾಗೂ ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮೊಗವೀರಪಟ್ಣದವರೆಗೆ ಜರಗಿದ ಮೆರವಣಿಗೆ ಮತ್ತು ಮೊಗವೀರಪಟ್ನ ಶಾಲೆಯಲ್ಲಿ ಜರಗಿದ ಸಮಸ್ತ ಉಳ್ಳಾಲದ ನಾಗರಿಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಧನೆಯ ಹಿಂದೆ ಬಾಳಿನ ಬಗ್ಗೆ ಆಸಕ್ತಿ, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಮತ್ತು ಇದಕ್ಕೆ ಪ್ರೋತ್ಸಾಹ ನೀಡಿದ ಪೋಷಕರ ಶ್ರಮವೂ ಇದೆ. ಸಿಂಧೂರಳ ಸಾಧನೆಯಲ್ಲಿ ಹೆಮ್ಮೆ ಪಡುವುದರ ಜೊತೆಗೆ, ಇಂತಹ ಪ್ರತಿಭೆಗಳನ್ನು ಇನ್ನಷ್ಟು ಬೆಳೆಸಬೇಕಾದ ಅಗತ್ಯವಿದೆ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಬಾಲಕಿಯ ಸಾಧನೆ ಬೇರೆಯವರಿಗೂ ಪ್ರೇರಣೆಯಾಗಬೇಕು. ಇವರು ಮಾಡಿರುವ ಸಾಧನೆ, ಇನ್ನೂ ಹೆಚ್ಚಿನ ಮಕ್ಕಳಲ್ಲಿ ಸಾಧಿಸಬಹುದು ಎಂಬ ಭರವಸೆಯನ್ನು ಮೂಡಿಸಲಿ. ಜ್ಞಾನ ಮತ್ತು ಸಾಂಸ್ಕೃತಿಕವಾಗಿ ಪ್ರಗತಿಪಥದಲ್ಲಿರುವಾಗ, ಇಂತಹ ಪ್ರತಿಭಾವಂತರನ್ನು ಬೆಳೆಸುವ ಮೂಲಕ ಸಮಾಜವನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತದೆ ಎಂದರು.
ಈ ಸಂದರ್ಭ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ್ ಅಮೀನ್, ಮಾಜಿ ಅಧ್ಯಕ್ಷರುಗಳಾದ ಸದಾನಂದ ಬಂಗೇರ, ಬಾಬು ಬಂಗೇರ, ಮನೋಜ್ ಸಾಲ್ಯಾನ್, ಮಾಜಿ ಮಂಡಲ ಪ್ರಧಾನ ಅಬ್ದುಲ್ ರಶೀದ್, ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಸಂಜೀವ ಪಡುಮಣೆ, ಪದ್ಮಶಾಲಿ ಸಮಾಜ ವೀರಭದ್ರ ದೇವಸ್ಥಾನ ಉಳ್ಳಾಲದ ಐತಪ್ಪ ಶೆಟ್ಟಿಗಾರ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಉಳ್ಳಾಲ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಗುರಿಕಾರರು ಸುರೇಂದ್ರ ಪುತ್ರನ್, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಳ್ಳಾಲದ ಗೌರವಾಧ್ಯಕ್ಷ ಶ್ರೀಕರ ಕಿಣಿ , ಸಿಂಧೂರ ರಾಜ ಕುಟುಂಬಿಕರಾದ ರಾಜ್ ದಯಾಳ್, ಶಿಬಾನಿ , ಶಶಿಕಾಂತಿ ಉಳ್ಳಾಲ್ ಉಪಸ್ಥಿತರಿದ್ದರು.
ರಾಜೇಶ್ ಪುತ್ರನ್ ಸ್ವಾಗತಿಸಿದರು. ಮನೋಜ್ ಸಾಲ್ಯಾನ್ ಪ್ರಸ್ತಾವನೆಗೈದರು. ರಾಜೇಶ್ ಉಳ್ಳಾಲ್ ವಂದಿಸಿದರು. ಆರ್.ಜೆ ಪ್ರಸನ್ನ ನಿರೂಪಿಸಿದರು. ಅಭಿನಂದನಾ ಪತ್ರವನ್ನು ಗುರುಪ್ರಸಾದ್ ವಾಚಿಸಿದರು.