
ಉಳ್ಳಾಲ: ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗ ದಾನಗೈದ ಕುಟುಂಬಕ್ಕೆ ಹಾಗೂ ಅಗಲಿದ ವ್ಯಕ್ತಿಗೆ ದೇರಳಕಟ್ಟೆ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಿಂದ ಗೌರವಪೂರ್ಣ ವಿದಾಯವನ್ನು ಸಲ್ಲಿಸಲಾಯಿತು.
ಮೆದುಳಿನ ಆಂತರಿಕ ರಕ್ತಸ್ರಾವದಿಂದ ಕುಸಿದುಬಿದ್ದ 55ರ ಹರೆಯದ ವ್ಯಕ್ತಿಯನ್ನು 2025ರ, ಜ.19 ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಂಡ ಪರಿಣಾಮಕಾರಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯೆಗೊಂಡಿದೆ. ಈ ಕುರಿತು ವೈದ್ಯರ ತಂಡ ಘೋಷಿಸಿದ ನಂತರ ಚಿಕಿತ್ಸಾ ತಂಡ ಅಂಗಾಂಗ ದಾನ ನಡೆಸುವ ಸಾಧ್ಯತೆಗಳ ಕುರಿತು ಕುಟುಂಬಕ್ಕೆ ಸಲಹೆಯನ್ನು ನೀಡಿತ್ತು. ಮೃತರು ಅಂಗಾಂಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಕುರಿತು ಕುಟುಂಬ ವರ್ಗ ಅವರ ಆಶಯಗಳನ್ನು ಗೌರವಿಸಲು ನಿರ್ಧಾರ ಪಡೆದುಕೊಂಡು ವೈದ್ಯರಲ್ಲಿ ತಿಳಿಸಿತ್ತು. ಈ ಕುರಿತು ಕಾನೂನು ವ್ಯಾಪ್ತಿಯ ಶಿಷ್ಟಾಚಾರಗಳನ್ನು ನಡೆಸಿದ ಯೆನೆಪೋಯ ವೈದ್ಯರ ತಂಡ ಜ.22 ರಂದು ಅಂಗಾಂಗ ದಾನದ ಪ್ರಕ್ರಿಯೆಯನ್ನು ಕೈಗೊಂಡಿತು. ಎರಡು ಮೂತ್ರಪಿಂಡ ಮತ್ತು ಕಾರ್ನಿಯಾಗಳನ್ನು ದೇಹದಿಂದ ಬೇರ್ಪಡಿಸಿ ಕಿಡ್ನಿ ಮತ್ತು ಎರಡು ಕಾರ್ನಿಯಾಗಳನ್ನು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಳಕೆ ಮತ್ತು ಇನ್ನೊಂದು ಮೂತ್ರಪಿಂಡವನ್ನು ಜ್ಯೋತಿ ಕೆಎಂಸಿ ಆಸ್ಪತ್ರೆಗೆ ಅವಶ್ಯಕತೆ ಮೇರೆಗೆ ನೀಡಲಾಯಿತು.
ಮೃತರ ಅಂಗಾಂಗ ದಾನ ಇತರರ ಜೀವನಕ್ಕೆ ಬೆಳಕಾಗಲಿದೆ ಅನ್ನುವ ಸಂದೇಶದೊಂದಿಗೆ, ಮೃತರಿಗೆ ಯೆನೆಪೋಯ ಸಂಸ್ಥೆ ಅಂತಿಮ ಗೌರವವನ್ನು ದೇರಳಕಟ್ಟೆ ಕ್ಯಾಂಪಸ್ಸಿನಲ್ಲಿ ಗೌರವಪೂರ್ಣವಾಗಿ ಸಲ್ಲಿಸಿತು.