


ತೊಕ್ಕೊಟ್ಟು : ನಾಗಿಣಿ ಸೀರಿಯಲ್ ಖ್ಯಾತಿಯ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಾಳು ದೀಪಿಕಾ ದಾಸ್ ಮಂಗಳೂರು ಹೊರವಲಯದ ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಗೆ ಭೇಟಿ ನೀಡಿ ಜನವರಿ ತಿಂಗಳಲ್ಲಿ ತೆರೆಕಾಣಲಿರುವ ತಾನು ನಟಿಸಿದ ಹೊಸ ಚಲನಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಬಳಿಕ ಮಾತನಾಡಿದ ನಟಿ, ತಾನು ನಟಿಸಿದ ಹ್ಯಾಷ್ ಟ್ಯಾಗ್ ಪಾರು ಪಾರ್ವತಿ ಚಲನಚಿತ್ರ ಜನವರಿ ತಿಂಗಳಲ್ಲಿ ತೆರೆಕಾಣಲಿದೆ. ಚಿತ್ರದ ಯಶಸ್ಸಿಗಾಗಿ ಅಜ್ಜನಲ್ಲಿ ಪ್ರಾರ್ಥಿಸಿರುವೆನು. ಮಂಗಳೂರು ಎಂದರೆ ದೈವ-ದೇವರ ನಾಡು, ಪ್ರತಿಬಾರಿಯೂ ಬಂದಾಗ ವಿಶೇಷವಾದ ಆಶೀರ್ವಾದ ಪಡೆದುಕೊಂಡಂತಾಗುತ್ತದೆ. ಮುಂದಿನ ಚಲನಚಿತ್ರ ʻಚೌಕಟ್ಟುʼ ಮಂಗಳೂರು ಮೂಲದ ಚಿತ್ರವಾಗಿದೆ. ತುಳುನಾಡಿನ ಕಲೆ ಯಕ್ಷಗಾನ, ಕೋಲ ಎಲ್ಲವೂ ಚಿತ್ರದಲ್ಲಿದ್ದು, ಮೂರು ತಿಂಗಳಲ್ಲಿ ಅದು ಕೂಡಾ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಅಜ್ಜನ ಹಾಗೂ ದೇವರ ಆಶೀರ್ವಾದದಿಂದ ಎರಡೂ ಚಿತ್ರಗಳಲ್ಲಿ ಕತೆಯೇ ನಾಯಕನಾಗಿದ್ದು, ಮಹಿಳಾ ಪ್ರಧಾನ ಕತೆಯಾಧಾರಿತದ್ದಾಗಿದೆ. ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಕ್ಷೇತ್ರಕ್ಕೆ ಈ ಹಿಂದೆ ಭೇಟಿ ಕೊಟ್ಟಿರುವೆ. ಕಲ್ಲಾಪು ಬುರ್ದುಗೋಳಿಗೆ ಪ್ರಥಮ ಭೇಟಿಯಾಗಿದ್ದು ಬಹಳಷ್ಟು ಖುಷಿಯಾಯಿತು ಎಂದರು.
ಈ ಸಂದರ್ಭ ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ನಾಯಕ್, ಕೋಶಾಧಿಕಾರಿ ನವೀನ್ ಕಾಯಂಗಳ, ಸಮಿತಿ ಸದಸ್ಯರುಗಳಾದ ಪ್ರಶಾಂತ್ ಕಾಯಂಗಳ, ಸಂತೋಷ್ ತೋಡ್ದಲ, ರಾಘವ ತೋಡ್ದಲ, ಯೋಗೀಶ್ ಆಚಾರ್ಯ, ವನಿತಾ ಗಿರೀಶ್, ಪ್ರಮೋದಿನಿ, ಸುಂದರಿ, ಶ್ಯಾಮಲಾ, ಹ್ಯಾಷ್ ಟ್ಯಾಗ್ ಪಾರು ಪಾರ್ವತಿ ಚಲನಚಿತ್ರ ನಿರ್ದೇಶಕ ರೋಹಿತ್ ಕೀರ್ತಿ, ಪವನ್ ಮುಂತಾದವರು ಉಪಸ್ಥಿತರಿದ್ದರು.
