ಕೋಝಿಕೋಡ್ : ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟವು ದೇಶದ ಶಕ್ತಿಯನ್ನೂ ಬಲವನ್ನೂ ಪ್ರತಿಬಿಂಬಿಸುವುದಷ್ಟೇ ಅಲ್ಲ, ಮಾನವೀಯತೆಯೆಂಬ ನಮ್ಮ ಶಾಶ್ವತವಾದ ಕಟ್ಟುಪಾಡುಗಳನ್ನೂ ಒತ್ತಿ ಹೇಳುವುದಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.
ಸೇನೆಯ `ಆಪರೇಷನ್ ಸಿಂದೂರ್’ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.
ಕಾಶ್ಮೀರವನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದಲ್ಲಿ ಅಶಾಂತಿ ಸೃಷ್ಟಿಸುವ ಭಯೋತ್ಪಾದನಾ ಚಟುವಟಿಕೆಗಳಿಗೆ ಮುಕ್ತಾಯ ತರಲು ಭಾರತದ ಕ್ರಮಗಳು ಪ್ರೇರಕವಾಗಬಹುದು. ರಾಜತಾಂತ್ರಿಕ ನಿಲುವುಗಳ ಮೂಲಕವೂ ಭಯೋತ್ಪಾಧನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ವ್ಯಾಪಕವಾಗಿಯೂ ಪರಿಣಾಮಕಾರಿ ಯಾಗಿಯೂ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಕೈಗೊಳ್ಳಲು ಮತ್ತು ಗೌರವಯುತ ಸಾಧನೆಗಳನ್ನು ತಲುಪಲು ಭಾರತಕ್ಕೆ ಸಾಧ್ಯವಾಗಲಿ ಎಂದು ಅವರು ಆಶಿಸಿದರು. ಈ ಪ್ರಯತ್ನಗಳನ್ನು ಬೆಂಬಲಿಸುವುದು ಮಾನವೀಯತೆಯಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಕರ್ತವ್ಯವೆಂದು ಅವರು ಹೇಳಿದರು. ಭಾರತದ ಭದ್ರತೆ, ಏಕತೆ ಮತ್ತು ಅಖಂಡತೆಗಾಗಿ ಎಲ್ಲ ನಾಗರಿಕರೂ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಗ್ರ್ಯಾಂಡ್ ಮುಫ್ತಿ ಕರೆ ನೀಡಿದರು.
