

ಮಂಗಳೂರು: ಮಾರುತಿ ಯುವಕ ಮಂಡಲ ತುಳುನಾಡಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಾದರಿಯಾದ ಸಂಘವಾಗಿ ಹೊರಹೊಮ್ಮಿದೆ. ನಾಲ್ಕು ದಶಕಗಳ ಸೇವೆಯಿಂದ ಅನೇಕ ಕುಟುಂಬಗಳ ಕಣ್ಣೀರು ಒರೆಸುವ ಕಾರ್ಯವಾಗಿದೆ. ಇದೀಗ ೪೦ ರ ಸಂಭ್ರಮದಲ್ಲಿ ಇನ್ನೂ ಅನೇಕ ಸಮಾಜಸೇವೆಗಳನ್ನು ನಡೆಸುವ ಮುಖೇನ ಎಲ್ಲಾ ವಗರ್ವದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದೆ. ಎಂದು ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಅವರು ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ೪೦ರ ಸಂಭ್ರಮದಲ್ಲಿ ಆಯೋಜಿಸಿರುವ ಮಾರುತಿ ಮಾಣಿಕ್ಯ ಮಹೋತ್ಸವ -೨೦೨೫ ಸೇವೆಯಲ್ಲಿ ಧನ್ಯತೆ ಕಾರ್ಯಕ್ರಮದ ನಾಲ್ಕು ಬಡ ಕುಟುಂಬಗಳಿಗೆ ಮನೆ ನಿರ್ಮಾಣದ ಯೋಜನೆಯ ಪೈಕಿ ಮೊದಲ ಮನೆಗೆ ಮಂಗಳಾದೇವಿ ಮಂಕಿಸ್ಟ್ಯಾಂಡ್ ಸಮೀಪ ನಡೆದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಲ್ಕು ದಶಕಗಳ ಸೇವೆಯಿಂದ ಸಂಸ್ಥೆ ಅಭೂತಪೂರ್ವಕವಾಗಿ ಜನಮನ್ನಣೆ ಪಡೆದುಕೊಂಡು ತುಳುನಾಡು ಮಾತ್ರವಲ್ಲ ರಾಜ್ಯದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡುಪ್ರತಿಷ್ಠಿತ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿದೆ. ೨ ಕೋಟಿ ರೂ ವೆಚ್ಚದಲ್ಲಿ ಉಳ್ಳಾಲದ ಮೊಗವೀರ ಶಾಲೆ ಅಭಿವೃದ್ಧಿ, ಬೀಚ್ ಉತ್ಸವ, ಕೊರೊನಾ ಸಂದರ್ಭ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕಾರ್ಯ, ಕ್ರೀಡಾಪಟುಗಳಿಗೆ ಶಕ್ತಿ ತುಂಬುವ ಕಾರ್ಯ, ರಕ್ತದಾನದ ಶಿಬಿರಗಳನ್ನು ಕಳೆದ ೪೦ ವರ್ಷಗಳಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ನಡೆಸಿಕೊಂಡು ಬಂದಿದೆ.
ರಾಜಕೀಯ, ಸ್ವಾರ್ಥರಹಿತವಾಗಿ ಆಸೆ, ಆಕಾಂಕ್ಷೆಗಳಿಲ್ಲದೇ ಮನಸ್ಸಿಗೆ ನೆಮ್ಮದಿ ಸಿಗುವ ಕಾರಣ ಇಟ್ಟುಕೊಂಡು ಸೇವೆಯನ್ನು ನಡೆಸುತ್ತಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಸಂಸ್ಥೆ ನಡೆಸುತ್ತಿದೆ. ಮಂಗಳೂರು ಉತ್ತರ, ಉಳ್ಳಾಲ, ಮಂಗಳೂರು ಭಾಗದಲ್ಲಿ ಯೋಜನೆ ಮುಖಾಂತರ ಬಡ ಕುಟುಂಬಸ್ಥರ ಆಶ್ರಯವನ್ನು ಕಲ್ಪಿಸಲು ಮುಂದಾಗಿರುವುದು ದೇವರು ಮೆಚ್ಚುವ ಕಾರ್ಯ, ಶಾಸಕನಾಗಿ ತನ್ನಿಂದ ಆಗುವ ಎಲ್ಲಾ ಸಹಕಾರವನ್ನು ಸಂಘಕ್ಕೆ ನೀಡುತ್ತೇನೆ. ಹಾಗೆಯೇ ದಾನಿಗಳು, ಉದ್ಯಮಿಗಳು ಸಂಘದ ಜೊತೆಗೆ ಕೈಜೋಡಿಸಬೇಕಿದೆ ಎಂದರು.
ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಮಾತನಾಡಿ, ಅಭೂತಪೂರ್ವ ಸಮಾಜಸೇವೆಗಳ ಮುಖೇನ ಮಾರುತಿ ಯುವಕ ಮಂಡಲ ಮಾದರಿ ಸಂಘಟನೆಯಾಗಿ ಹೊರಹೊಮ್ಮಲಿ. ಜನರ ಕಣ್ಣೀರು ಒರೆಸುವುದು ಮಹಾನ್ ಕಾರ್ಯವಾಗಿದೆ ಎಂದರು.
ಈ ಸಂದರ್ಭ ಮತ್ಸೋದ್ಯಮಿ ಮೋಹನ್ ಬೆಂಗ್ರೆ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಗೌರವಾಧ್ಯಕ್ಷ ವರದ್ ರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ವಿ. ಅಮೀನ್, ಉಪಾಧ್ಯಕ್ಷರುಗಳಾದ ಪ್ರಶಾಂತ್ ಬಿ. ಉಳ್ಳಾಲ್, ಕಿರಣ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್. ಬಂಗೇರ, ಅನಿಲ್ ಚರಣ್, ಅಶ್ವಿನ್, ಮಹೇಶ್ ಕುಮಾರ್, ಪ್ರಕಾಶ್, ಪುನೀತ್, ಕಮಲಾಕ್ಷ ,ಸುದೀರ್ ಸುವರ್ಣಾ, ಮನೋಹರ್, ವಾಸುದೇವ್, ಮಹೇಶ್ ಸಾಲ್ಯಾನ್, ಕಿರಣ್ ಪುತ್ರನ್, ಮುಂತಾದವರು ಉಪಸ್ಥಿತರಿದ್ದರು.
ನಾಲ್ಕು ಮನೆಗಳ ನಿರ್ಮಾಣದ ಯೋಜನೆಗೆ ಸಂಘ ಮುಂದಾಗಿದೆ. ಮಂಕಿಸ್ಟ್ಯಾಂಡ್ ನಲ್ಲಿ ತಾಯಿ ಹಾಗೂ ಶಿಕ್ಷಣ ಕಲಿಯುವ ಇಬ್ಬರು ಹೆಣ್ಮಕ್ಕಳಿರುವ ಕುಟುಂಬದ ಕುರಿತು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಗಮನಕ್ಕೆ ತಂದಿದ್ದರು. ಅದರಂತೆ ಗಾಳಿ ಮಳೆಗೆ ಬಿದ್ದಿದ್ದ , ಮನೆ ಕಟ್ಟಲು ಅಸಾಧ್ಯದಂತಿರುವ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು ಮನೆಯನ್ನು ನಿರ್ಮಿಸುವ ಯೋಜನೆಗೆ ಮುಂದಾಗಿದ್ದೇವೆ..
ವರದರಾಜ್ ಬಂಗೇರ
ಗೌರವಾಧ್ಯಕ್ಷರು