

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಟೋಲ್ ಬೂತ್ ಗಳು ಕರ್ಯಾಚರಿಸಲಿದೆ. ಈ ಭಾಗದ ಜನರ ಆದಾಯದ ಬಹುಪಾಲು ಟೋಲ್ ಕಟ್ಟಲೆಂದೇ ವಿನಿಯೋಗವಾಗಲಿದೆ. ಈ ಕೂಡಲೇ ಹೋರಾಟಕ್ಕೆ ಸಜ್ಜಾಗುವ ಅನಿವಾರ್ಯತೆ ಇದೆ. ತಲಪಾಡಿ ಟೋಲ್ ಬೂತ್ ವಿರುದ್ಧ ಮಂಜೇಶ್ವರ ನಿವಾಸಿಗಳು ಮಾತ್ರವಲ್ಲ ತಲಪಾಡಿ ನಿವಾಸಿಗಳಿಗೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಿಪಿಐಎಂ ಜಿಲ್ಲಾ ಕರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಮಂಜೇಶ್ವರ ಗ್ರಾಮ ಪಂಚಾಯತ್ ಆಕ್ಷನ್ ಕಮಿಟಿ ಆಶ್ರಯದಲ್ಲಿ ತಲಪಾಡಿ ಟೋಲ್ ಬೂತ್ ಎದುರುಗಡೆ ಮಂಜೇಶ್ವರದ ಆಸುಪಾಸಿನ ಎಲ್ಲಾ ನಿವಾಸಿಗಳು ಜತೆ ಸೇರಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಹೆದ್ದಾರಿಗಳು ಮೇಲ್ದರ್ಜೆಗೆ ಏರುವ ಪ್ರಕ್ರಿಯೆಯಲ್ಲಿದೆ. ಬಿ.ಸಿ.ರೋಡಿನಿಂದ ಗುಂಡ್ಯಕ್ಕೆ ಹೋಗುವ ಹೆದ್ದಾರಿ ಮಧ್ಯೆ ಎರಡು ಟೋಲ್ ಗೇಟ್ ಗಳು, ಬೆಳ್ತಂಗಡಿ ಚಾರ್ಮಾಡಿ ಭಾಗದಲ್ಲಿಯೂ ಒಂದು ಟೋಲ್, ಗಂಜಿಮಠ ಸೂರಲ್ಪಾಡಿ ಟೋಲ್, ಟೋಲ್ ಬೂತ್ ಸ್ಟ್ರಕ್ಚರ್ ಆರಂಭವಾಗಿದೆ. ಸುರತ್ಕಲ್, ಬ್ರಹ್ಮರಕೂಟ್ಲು, ಹೆಜಮಾಡಿ, ಸಾಸ್ತಾನ, ಕುಂದಾಪುರ ಈಗಾಗಲೇ ಇದೆ. ತುಳುನಾಡಿನ ಉದ್ದಕ್ಕೂ ಟೋಲ್ ಗಳೇ ಇರುವುದರಿಂದ ಜನರ ಆದಾಯದ ಬಹುಪಾಲು ಟೋಲ್ ಗೇ ಹೋಗಲಿದೆ. ಹಿಂದೆ ಸ್ಥಳೀಯರಿಗೆ ಟೋಲ್ ವಸೂಲಾತಿ ವಿರುದ್ಧ ಪ್ರತಿಭಟಿಸಿದಾಗ ತಾತ್ಕಾಲಿಕ ವಿನಾಯಿತಿ ನೀಡುವ ಸಂಸ್ಥೆ, ಮತ್ತೆ ಪ್ರತಿಭಟನೆಗಳು ತಣ್ಣಗಾಗುವಾಗ ಸುಂಕ ವಸೂಲಿ ಮಾಡುತ್ತಲೇ ಬರುತ್ತಾರೆ. ಇದೀಗ ಮಂಜೇಶ್ವರ ನಿವಾಸಿಗಳಿಂದ ಸುಂಕ ಪಡೆಯುತ್ತಿದ್ದರೆ ಮುಂದೊಂದು ದಿನ ತಲಪಾಡಿ ನಿವಾಸಿಗಳಿಂದಲೂ ಸುಂಕ ಪಡೆಯುವುದು ಖಚಿತ. ಹಾಗಾಗಿ ಕರ್ನಾಟಕ-ಕೇರಳ ಎರಡೂ ಕಡೆಯವರು ಸೇರಿಕೊಂಡು ಹೋರಾಟ ನಡೆಸಬೇಕಿದೆ. ಖಾಸಗಿ ಹೂಡಿಕೆಯೊಂದಿಗೆ ರಸ್ತೆಗಳನ್ನು ನಿರ್ಮಿಸಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಿ ಜನರನ್ನು ದೋಚುವ ಕಾರ್ಯಗಳಾಗುತ್ತಿದೆ. 5 ಕಿ.ಮೀ ನಿವಾಸಿಗಳಿಗೆ ಟೋಲ್ ಪಡೆಯಬೇಕೆಂದೇನಿಲ್ಲ. ಹೆದ್ದಾರಿಯವರು ಕಾನೂನು ಪ್ರಕಾರ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ಹೋರಾಟದಲ್ಲಿ ಎಲ್ಲರೂ ಗಟ್ಟಿಯಾಗಿ ನಿಂತಾಗ ಮಾತ್ರ ದೆಹಲಿಯವರೆಗೆ ಕೂಗು ತಲುಪಲು ಸಾಧ್ಯ ಎಂದರು.
ಪ್ರತಿಭಟನೆಯನ್ನು ಉದ್ಘಾಟಿಸಿದ ತಲಪಾಡಿ ಚರ್ಚ್ ಸಮಿತಿ ಉಪಾಧ್ಯಕ್ಷ ಲೀನಾ ಡಿಕೋಸ್ಟಾ ಮಾತನಾಡಿ ಪ್ರತಿ ಕಾರ್ಯಕ್ಕೆ ಮಂಗಳೂರನ್ನೇ ಅವಲಂಬಿತರಾಗಿದ್ದೇವೆ. ದಿನದಲ್ಲಿ 2-3 ಬಾರಿಯಾದರೂ ಮಂಗಳೂರಿಗೆ ಹೋಗಬೇಕಿದೆ. ಅಷ್ಟೂ ಸಲ ಸುಂಕ ಪಾವತಿಸಿ ಹೋಗುವುದು ಅಸಾಧ್ಯದ ಮಾತು. ಹಿಂದೆ ಕೇರಳ-ಕರ್ನಾಟಕ ಎಂಬ ಬೇಧವಿರದೇ 5 ಕಿ.ಮೀ ವ್ಯಾಪ್ತಿಯವರಿಗೆ ಸುಂಕ ಪಡೆಯುತ್ತಿರಲಿಲ್ಲ ಎಂದರು.
ಬಿಜೆಪಿ ಮುಖಂಡೆ ಅಶ್ವಿನಿ ಮಾತನಾಡಿ , ಸಂಬಂಧಿಕರ ಮನೆಯೂ ಹತ್ತಿರದಲ್ಲೇ ಇದೆ. ಹತ್ತಿರದವರು ಆಗಾಗ್ಗ ಹೋಗಿಬರುವುದರಿಂದ ಸಾಕಷ್ಟು ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ಅಚ್ಚುಕಟ್ಟಾದ ರಸ್ತೆಯನ್ನು ಕೇಂದ್ರ ಸರಕಾರ ನಿರ್ಮಿಸಿಕೊಟ್ಟರೂ, ಸುಂಕ ವಸೂಲಾತಿ ನಡೆಸುವ ಏಜೆನ್ಸಿಗಳು ಜನರಿಗೆ ದ್ರೋಹವನ್ನು ಎಸೆಯುತ್ತಿದೆ. ಸುಂಕ ವಸೂಲಾತಿ ವಿರುದ್ಧ ಕೇಂದ್ರ ಸಮಿತಿಯ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಸಿಪಿಎಂ ಮಂಜೇಶ್ವರ ಸಮಿತಿಯ ವಿ.ವಿ.ರಮೇಶ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಿನ್ ಲವೀನಾ ಮೊಂತೇರೊ, ಮುಸ್ಲಿಂ ಲೀಗ್ ಮುಖಂಡ ಸೈಫುಲ್ಲಾ ತಂಙಳ್, ಎಸ್ ಡಿಪಿಐ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಪಾವೂರು, ಪೀಪಲ್ಸ್ ಯೂನಿಯನ್ ನ ನಿಸಾರ್ ಕುಂಜತ್ತೂರು, ಎಸ್ ಡಿಪಿಐನ ಅಶ್ರಫ್ ಹಾಗೂ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ ಉಪಸ್ಥಿತರಿದ್ದರು.