
ಮುಡಿಪು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಂಬಂಧಿಕರೋರ್ವರಿಗೆ ತನ್ನ ಕಿಡ್ನಿಯನ್ನು ನೀಡಿ, ಮೇ.29 ರಂದು ನಿಗದಿಯಾಗಿರುವ ಸಹೋದರನ ವಿವಾಹವನ್ನು ನಿಲ್ಲಿಸದಂತೆ ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ತಾನು ಕಲಿತ ಶಾಲೆಯ ಆವರಣದಲ್ಲಿ ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡು ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ಕುರ್ನಾಡು ಹೂವಿನಕೊಪ್ಪಲ ನಿವಾಸಿ ಸುಧೀರ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ಪೈಂಟರ್ ವೃತ್ತಿಯನ್ನು ನಿರ್ವಹಿಸುತ್ತಿರುವ ಸುಧೀರ್, ಇಂದು ನಸುಕಿನ ಜಾವ ಬೈಕ್ ನಲ್ಲಿ ಹಾಲು ತರಲೆಂದು ಮನೆಯಿಂದ ತೆರಳಿದ್ದವರು ವಾಪಸ್ಸಾಗಿರಲಿಲ್ಲ. ತಡವಾದರೂ ಮಗ ಬಾರದ ಹಿನ್ನೆಲೆಯಲ್ಲಿ ಬೆದರಿದ ತಾಯಿ ಸುಧೀರ್ ನನ್ನು ಹುಡುಕೊಂಡು ಹೋದಾಗ ಮನೆ ಸಮೀಪದ ಶಾಲೆಯ ಹೊರಗಡೆ ಬೈಕ್ ಕೀ ಸಮೇತ ಪತ್ತೆಯಾಗಿತ್ತು. ಶಾಲೆಯೊಳಗಡೆ ಗಮನಿಸುವಾಗ ಸುಧೀರ್ ಶಾಲೆಯ ಮಹಡಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅವಿವಾಹಿತ ಸುಧೀರ್, ತನ್ನ ಸಂಬಂಧಿಕರೋರ್ವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ತನ್ನ ಕಿಡ್ನಿ ದಾನಗೈಯ್ಯುವಂತೆ ಹಾಗೂ ಮೇ.29 ರಂದು ನಿಗದಿಯಾಗಿರುವ ಸಹೋದರನ ವಿವಾಹವನ್ನು ತನ್ನ ಸಾವಿಗಾಗಿ ನಿಲ್ಲಿಸದಂತೆ ಡೆತ್ ನೋಟ್ ಬರೆದಿಟ್ಟು ಕೃತ್ಯವೆಸಗಿದ್ದಾರೆ. ಈ ಹಿಂದೆ ತನ್ನ ಕೂದಲು ಉದುರುವುದಾಗಿ ಹೇಳಿಕೊಂಡಿದ್ದ ಸುಧೀರ್, ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದಲೇ ಬೇಸತ್ತು ಆತ್ಮಹತ್ಯೆಗೈದಿರುವ ಶಂಕೆಯಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀ ದತ್ತಾತ್ರೇಯ ಭಜನಾ ಹಾಗೂ ಯಕ್ಷಗಾನ ಸಂಘದ ಸದಸ್ಯನಾಗಿದ್ದ ಹಾಗೂ ಉತ್ತಮ ಕ್ರಿಕೆಟ್ ಆಟಗಾರನೂ ಆಗಿದ್ದ.


