


















ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದು, ಅಬ್ಬುಸಾಲಿ ಕೆ.ಬಿ ಕಿನ್ಯಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ವೇಳೆ ಮಾತನಾಡಿದ ಕೃಷ್ಣ ಶೆಟ್ಟಿ ಕೋಟೆಕಾರುಗುತ್ತು, ಕಳೆದ ಐದು ವರ್ಷ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಧ್ಯಕ್ಷನಾಗಿ ನಿರ್ದೇಶಕ ಮಿತ್ರರ ಪಾರದರ್ಶಕ ಆಡಳಿತ ನೀಡಿರುತ್ತೇನೆ. ಐದು ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಲಾಗಿದೆ,. ಹಲವು ರೈತಪರ ಯೋಜನೆಗಳು, ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ. ಭತ್ತ ಬೆಳೆಸುವ ಕೃಷಿಕರಿಗೆ ಪ್ರೋತ್ಸಾಹ ಧನ, ಮೈಲುಸುತ್ತಿನಲ್ಲಿ ಸಬ್ಸಿಡಿ, ಎಸ್ ಎಸ್ ಎಲ್ ಸಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಗೌರವ, ಸರಕಾರಿ ಶಾಲೆಯನ್ನು ಗುರುತಿಸಿ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್, ಕೊಡೆ ಸಾಮಗ್ರಿಗಳನ್ನು ವಿತರಿಲಾಗಿದೆ. ಕೋಟೆಕಾರು ಬೀರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಶಾಶ್ವತ ಲಾಭ ಬರುವ ಯೋಜನೆಯನ್ನು ಕಲ್ಪಿಸಲಾಗಿದೆ. ಐದು ವರ್ಷಗಳ ಸಾಧನೆಯನ್ನು ಗಮನಿಸಿ ಅಪೆಕ್ಸ್ ಸಾಧಕ ಪ್ರಶಸ್ತಿಯೂ ಬ್ಯಾಂಕಿಗೆ ಲಭಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸತತವಾಗಿ ಡಿಸಿಸಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಎಲ್ಲಾ ಕಾರ್ಯಕ್ರಮಗಳನ್ನು ಗಮನಿಸಿರುವ ರೈತರು, ಸಹಕಾರಿ ಮಿತ್ರರು ಇನ್ನೊಂದು ಬಾರಿಗೆ ಅವಕಾಶ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞೆತೆಗಳು. ಮುಂದಿನ ಐದು ವರ್ಷ ರಾಜ್ಯದಲ್ಲೇ ಕೋಟೆಕಾರು ಬ್ಯಾಂಕ್ ದೊಡ್ಡ ಬ್ಯಾಂಕ್ ಆಗಿ ಹೆಸರುವಾಸಿಯಾಗಿಸುವ ಉದ್ದೇಶ ಹೊಂದಿದೆ. ಈವರೆಗೆ ಸಹಕರಿಸಿದ ನಿರ್ದೇಶಕ ಮಿತ್ರರಿಗೂ, ಚುನಾವಣೆಯಲ್ಲಿ ಸಹಕರಿಸಿದ ಮಿತ್ರರು, ಮತದಾರರಿಗೆ ಅಭಿನಂದನೆಗಳು ಎಂದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಅಬ್ಬುಸಾಲಿ ಕೆ.ಬಿ ಕಿನ್ಯಾ ಮಾತನಾಡಿ ಎಲ್ಲಾ ನಿರ್ದೇಶಕರು ಜತೆಗೂಡಿ ಆಯ್ಕೆ ಮಾಡಿರುವುದು ಸಂತಸವನ್ನು ಕೊಟ್ಟಿದೆ. ಶಾಸಕರು, ಸಭಾಧ್ಯಕ್ಷರ ಮಾರ್ಗದರ್ಶನದಂತೆ ಚುನಾವಣೆಯಲ್ಲಿಯೂ ಭಾಗವಹಿಸುವ ಮೂಲಕ ಯಶಸ್ಸನ್ನು ಪಡೆದುಕೊಂಡಿದ್ದೇವೆ. ಶಾಸಕರಿಗೆ, ಮತದಾರರಿಗೆ ಹಾಗೂ ನಿರ್ದೇಶಕ ಮಿತ್ರರಿಗೆ ಅಭಿನಂದನೆಗಳು ಎಂದರು.
ನಿರ್ದೇಶಕರುಗಳಾದ ಕೃಷ್ಣಪ್ಪ ಬೆಳ್ಮ, ಬಾಬು ನಾಯ್ಕ ಬೋಳಿಯಾರು, ಅರುಣ್ ಯು. ಉಳ್ಳಾಲ್ , ಸುನಿತಾ ಲೋಬೋ ಪಾವೂರು, ಸುರೇಖಾ ಚಂದ್ರಹಾಸ್ ತಲಪಾಡಿ , ಕೃಷ್ಣಪ್ಪ ಸಾಲಿಯಾನ್ ಕುತ್ತಾರ್, ಗಂಗಾಧರ ಯು. ಪೆರ್ಮನ್ನೂರು, ರಾಘವ ಉಚ್ಚಿಲ್, ರಾಘವ ಆರ್. ಉಚ್ಚಿಲ್ , ಉದಯ ಕುಮಾರ್ ಶೆಟ್ಟಿ ಕೊಂಡಾಣ ಗುತ್ತು ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿಯಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಇಲ್ಲಿನ ಅಧೀಕ್ಷಕ ಬಿ. ನಾಗೇಂದ್ರ ಫಲಿತಾಂಶವನ್ನು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿ ಎಲ್ಲರಿಗೂ ಪ್ರಮಾಣಪತ್ರವನ್ನು ವಿತರಿಸಿದರು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಮತದಾರರು, ಮುಖಂಡರು, ಸಿಬ್ಬಂದಿ ಅಭಿನಂದಿಸಿದರು.

