
ಮಂಗಳೂರು : ಶಿಕ್ಷಕರು ಸಮಾಜದ ಎರಡು ಕಣ್ಣುಗಳು ಇದ್ದ ಹಾಗೆ, ದೇಶದ ಮುಂದಿನ ಭವಿಷ್ಯ ಯುವಕರ ಕೈಯಲ್ಲಿದೆ, ವಿದ್ಯಾರ್ಥಿ ಜೀವನದಲ್ಲೇ ಮಕ್ಕಳಿಗೆ ಹೊಂದಾಣಿಕೆಯ ಮನೋಭಾವ,ದೇಶಭಿಮಾನ,ಸೌಹಾರ್ದತೆ, ಸ್ವಯಂ ಶಿಸ್ತು ಮುಂತಾದ ಗುಣಗಳನ್ನು ಕಲಿಸಿ, ಸಮಾಜಕ್ಕೆ ಅರ್ಪಣೆ ಮಾಡುವ ಶಕ್ತಿ ಶಿಕ್ಷಕರಿಗಿದೆ. ಅಂತಹ ಜ್ಞಾನವನ್ನು ಪಡೆದ ಮಕ್ಕಳು ದೇಶವನ್ನು ಕಟ್ಟುತ್ತಾರೆ. ಈ ದೃಷ್ಟಿಯಲ್ಲಿ ಶಿಕ್ಷಕರ ಪಾತ್ರ ಅಪಾರ ವಾದದ್ದು ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್ ಅಭಿಪ್ರಾಯ ಪಟ್ಟರು.
ಅವರು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯ ವತಿಯಿಂದ ನಡೆದ ನಿವೃತ್ತ ಶಿಕ್ಷಕಿ ಜಾನೆಟ್ ಲೋಬೊ ಅವರ ವಿದಾಯ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿನಂದನ ಭಾಷಣವನ್ನು ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ನೆರವೇರಿಸಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಪಾಡು ಹೇಳುವಂತಿಲ್ಲ, ಒಂದು ಕಡೆ ಶಿಕ್ಷಕರ ಕೊರತೆ, ಮತ್ತೊಂದಡೆ ಶಾಲೆ ಮುಚ್ಚುವ ಭೀತಿ, ಇವೆರಡರ ನಡುವೆ ಕರ್ತವ್ಯ ನಿರ್ವಹಿಸುವ ಶಿಕ್ಷಕರಲ್ಲಿ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಖೇದಕರ. ಎಂತಹ ಸಮಸ್ಯೆಗಳು ಇದ್ದರೂ ಕೂಡ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪಾಠ, ಪ್ರವಚನಗಳು ಅತ್ಯುತ್ತಮವಾಗಿ ನಡೆಯುವುದರೊಂದಿಗೆ ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮತ್ತು ಶಿಸ್ತು ಬದ್ಧವಾಗಿ ಸಂಘಟನೆ ಮಾಡುವುದರೊಂದಿಗೆ ಗುರುತಿಸಿಕೊಂಡಿರುವುದು ಅಭಿನಂದನೀಯ. ನಿವೃತ್ತಿ ಹೊಂದುತ್ತಿರುವ ಜಾನೆಟ್ ಲೋಬೊ ಅವರು ಒಬ್ಬ ಕ್ರಿಯಾಶೀಲ ಶಿಕ್ಷಕಿಯಾಗಿದ್ದು, ಶಾಲೆಯ ಎಲ್ಲಾ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ಮಾಡುತ್ತಿದ್ದರು. ಇವರ ನಿವೃತ್ತಿ ಜೀವನಕ್ಕೆ ಶುಭಾಶಯಗಳನ್ನು ಕೋರಿದರು. ವೇದಿಕೆಯಲ್ಲಿ ಸಂಘದ ಕಾರ್ಯಕಾರಿಣಿ ಸದಸ್ಯರಾದ ರೋನಾಲ್ಡ್ ಪೌಲ್, ಶಿಕ್ಷಕರುಗಳಾದ ಸಿಸ್ಟರ್ ಫಿಲೋಮಿನ, ರೇಷ್ಮಾ ಡಿಸೋಜ, ನಾಗರತ್ನ, ಅಸುರಬಾನು, ಮುಂತಾದವರು ಉಪಸ್ಥಿತರಿದ್ದರು.
ಸಂಘದ ಹಿರಿಯ ಉಪಾಧ್ಯಕ್ಷರಾದ ರಘುನಾಥ ಭಟ್ ಸರ್ವರನ್ನು ಸ್ವಾಗತಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಗೀತಾ ಶೆಟ್ಟಿ ಪ್ರಾರ್ಥಿಸಿದರು ಸೈಂಟ್ ಜೋಸೆಫ್ ದಿ ವರ್ಕರ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಕ್ವೀನ್ ಆನಿ ಫೆರ್ನಾಂಡಿಸ್ ಅವರು ಧನ್ಯವಾದ ವಿತ್ತರು. ಸಂಘದ ಪದಾಧಿಕಾರಿಗಳಾದ ಶ್ರೀಮತಿ ಗ್ಲೋರಿಯ ಅನುನ್ಸಿಯ ಲೋಬೊ ಅವರು ಕಾರ್ಯಕ್ರಮ ನಿರೂಪಿಸಿದರು.
