
ಉಳ್ಳಾಲ : ಕರ್ನಾಟಕ ಕಾಂಗ್ರೆಸ್ ನ ಅಧ್ಯಕ್ಷರು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿರುವುದರ ವಿರುದ್ದ ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತ ಪಡಿಸಲಾಯಿತು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವತ್ತೆಬೈಲ್ ರವರು ಮಾತನಾಡಿ, ಕಾಂಗ್ರೆಸ್ ನ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನದ ಸಣ್ಣ ಪುಸ್ತಕವನ್ನಿಟ್ಟು ಲೋಕಸಭೆಯ ಒಳಗೆ ಸಂವಿಧಾನದ ರಕ್ಷಕ ಎಂದು ನಾಟಕವಾಡುತ್ತಿದ್ದರೆ, ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯು ಇದನ್ನು ಬಲವಾಗಿ ಖಂಡಿಸುತ್ತದೆ. ಮತ್ತು ಕಾಂಗ್ರೆಸ್ ನ ಅಸಲಿ ಬಂಡವಾಳವನ್ನು ಜನರು ಅರಿಯಬೇಕಿದೆ ಎಂದರು.
ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ, ದಲಿತ ನಾಯಕರಾದ ದಿನೇಶ್ ಅಮ್ಟೂರು ಮಾತನಾಡಿ, ಕಾಂಗ್ರೆಸ್ ನ ದಲಿತ ವಿರೋಧಿ ನೀತಿಗಳ ವಿರುದ್ದ ಸಮಾಜ ಧ್ವನಿ ಎತ್ತಬೇಕಿದೆ. ಇಲ್ಲವಾದರೆ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯಗಳನ್ನು ಬದಿಗಿಟ್ಟು ಪರಿಶಿಷ್ಟ ಜಾತಿ, ಪಂಗಡಗಳಿಗೆ ನ್ಯಾಯಯುತವಾಗಿ ಸಿಗಬೇಕಿರುವ ಮೀಸಲಾತಿಗಳನ್ನು ಮುಸ್ಲಿಮರಿಗೆ ನೀಡಲು ಪ್ರಯತ್ನಿಸಲಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡುತ್ತಾ ಸಂವಿಧಾನ ಬದಲಾಯಿಸುತ್ತೇವೆ ಎಂದು ರಾಜಾರೋಷವಾಗಿ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಗಳು ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷರುಗಳಾದ ಸೀತರಾಮ ಬಂಗೇರ, ಚಂದ್ರಶೇಖರ ಉಚ್ಚಿಲ, ಪದಾಧಿಕಾರಿಗಳಾದ ಹೇಮಂತ್ ಶೆಟ್ಟಿ, ಯಶವಂತ ದೇರಾಜೆ, ಪ್ರಕಾಶ್ ಸಿಂಫೋನಿ, ರಮೇಶ್ ಬೆದ್ರೊಳಿಕೆ, ಸುಮನಾ ಶೆಟ್ಟಿ, ಕೋಟೆಕಾರ್ ಪಟ್ಟಣ ಪಂ.ಅಧ್ಯಕ್ಷರಾದ ದಿವ್ಯಾ ಶೆಟ್ಟಿ, ಸೋಮೇಶ್ವರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ, ಕೋಣಾಜೆ ಗ್ರಾಮ ಪಂ.ಉಪಾಧ್ಯಕ್ಷರಾದ ಹರಿಶ್ಚಂದ್ರ, ಪಕ್ಷದ ಪ್ರಮುಖರಾದ ಮಾಧವಿ ಉಳ್ಳಾಲ, ಮುರಳಿ ಕೋಣಾಜೆ, ಬೃಜೇಶ್ ನಾಯರ್ ವರುಣ್ ತಲಪಾಡಿ, ಪದ್ಮನಾಭ ಗಟ್ಟಿ, ಸುಮಲತಾ, ಹರಿಣಾಕ್ಷಿ, ಶೇಖರ್ ಕನೀರ್ ತೋಟ, ಹರೀಶ್ ಅಂಬ್ಲಮೊಗರು, ಸ್ವಪ್ನಾ ಶೆಟ್ಟಿ, ಸತೀಶ್ ಪೂಜಾರಿ, ಇನ್ನಿತರರು ಭಾಗವಹಿಸಿದ್ದರು.
ಮಂಡಲ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು, ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ವಂದಿಸಿದರು.


