ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ದಾರಿಬದಿಯಲ್ಲಿದ್ದ ಒಣ ಮೀನು ಮಾರಾಟ ಮತ್ತು ಹೂವಿನ ಮಾರಾಟದ ಮೂರು ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ತೊಕ್ಕೊಟ್ಟು ಸಮೀಪ ಭಾನುವಾರ ತಡರಾತ್ರಿ ವೇಳೆ ನಡೆದಿದೆ.

ಮಹಮ್ಮದ್ ಹನೀಫ್ , ಹೆಚ್.ಮನ್ಸೂರ್, ಅಬೂಬಕರ್ ಎಂಬವರ ಸೇರಿದ ಅಂಗಡಿಗಳಿಗೆ ಹಾನಿಗೀಡಾಗಿದೆ. ಭಾನುವಾರ ಸಂಜೆಯೂ ನಡೆದ ಘಟನೆಯಲ್ಲಿ ರೆಡು ಅಂಗಡಿಗಳಿಗೆ ಬೆಂಕಿ ತಗಲಿರುವುದನ್ನು ಕಂಡು ಸ್ಥಳೀಯರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಆದರೂ ಅಂಗಡಿಯೊಳಗಿದ್ದ ಒಣಮೀನು ಮತ್ತು ಹೂವು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಿಂದ ಸಾವಿರಾರು ರೂ ನಷ್ಟ ಸಂಭವಿಸಿದೆ.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಇಲ್ಲಿನ ಗೂಡಂಗಡಿಗಳು ಬೆಂಕಿ ಅನಾಹುತಕ್ಕೆ ಒಳಗಾಗುತ್ತಿದೆ. ಕಳೆದ ವರ್ಷ ರಸ್ತೆಬದಿಯಲ್ಲಿದ್ದ ಎಂಟು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಘಟನೆಯಲ್ಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಲಕ್ಷಾಂತರ ನಷ್ಟ ಉಂಟಾಗಿತ್ತು. ಸಂಶಯಾಸ್ಪದವಾಗಿ ಸ್ಥಳದಲ್ಲಿ ತಿರುಗಾಡುತ್ತಿದ್ದ ಬೇರೆ ರಾಜ್ಯದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿ ಮಲಗಿದ್ದ ಭಿಕ್ಷುಕರು ನೀಡಿದ ಮಾಹಿತಿಯಂತೆ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ವಿಚಾರಣೆ ವೇಳೆ ಆತ ಅಮಾಯಕನೆಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.