ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಸೈಗೋಳಿ: ಕಳೆದ ಹಲವು ವರ್ಷಗಳಿಂದ ರಾಜ್ಯ ಸರಕಾರ ಅಬ್ಬಕ್ಕ ಉತ್ಸವಕ್ಕೆ ಅನುದಾನ ಪೂರೈಸುವುದರಿಂದ ಸರಕಾರಿ ಉತ್ಸವವಾಗಿ ಆಚರಿಸಲಾಗುತ್ತಿದ್ದು, ಈ ಬಾರಿ ಅಸೈಗೋಳಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಅವರು ಅಸೈಗೋಳಿ ಮುಖ್ಯಪೇಟೆಯಲ್ಲಿ ಫೆ.4 ಮತ್ತು 5 ರಂದು ನಡೆಯಲಿರುವ ಅಬ್ಬಕ್ಕ ಉತ್ಸವದ ಚಪ್ಪರ ಮುಹೂರ್ತದಲ್ಲಿ ಭಾಗವಹಿಸಿ ಮಾತನಾಡಿದರು.
1992 ರಿಂದ ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವ ಆರಂಭವಾಗಿತ್ತು. ಕೆಲ ವರ್ಷಗಳಿಂದ ರಾಜ್ಯ ಸರಕಾರ ಅನುದಾನ ಪೂರೈಸುತ್ತಿದ್ದು, ಸರಕಾರಿ ಉತ್ಸವವಾಗಿ ಆಚರಿಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಮಾತನಾಡಿ ಎರಡನೇ ಬಾರಿ ಅಸೈಗೋಳಿಯಲ್ಲಿ ಅಬ್ಬಕ್ಕ ಉತ್ಸವವನ್ನು ಆಚರಿಸಲಾಗುತ್ತಿದ್ದು, ಹಿಂದೆ ನಡೆದಾಗ ಸಾರ್ವಜನಿಕರಿಂದ ಉತ್ತಮ ಸ್ಪಂಧನೆ ಹಾಗೂ ಪ್ರಶಂಸೆಯೂ ವ್ಯಕ್ತವಾಗಿತ್ತು. ಅಸೈಗೋಳಿ, ಮುಡಿಪು, ಕೊಣಾಜೆ ಭಾಗದ ಮಂದಿ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 3,000 ಮಂದಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸುಹಾಸಿನಿ ಬಬ್ಬುಕಟ್ಟೆ, ಹಿರಿಯರಾದ ರಘುರಾಮ ಕಾಜವ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ, ಶಿಕ್ಷಕ ತ್ಯಾಗಂ ಹರೇಕಳ, ಎಪಿಎಂಸಿ ಸದಸ್ಯೆ ಮುತ್ತು.ಯನ್.ಶೆಟ್ಟಿ, ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಅಲಿ, ನಿವೃತ್ತ ಶಿಕ್ಷಕ ತಾರನಾಥ ರೈ, ಕೊಣಾಜೆ ಗ್ರಾ.ಪಂ ಅಧ್ಯಕ್ಷ ಶೌಕತ್ ಅಲಿ, ಉಪಾಧ್ಯಕ್ಷೆ ಲಲಿತಾ .ಯಸ್.ರಾವ್, ಸದಸ್ಯರಾದ ವೇದಾವತಿ ಗಟ್ಟಿ, ಅಚ್ಚುತ್ತ ಗಟ್ಟಿ, ಪ್ರಕಾಶ್ ಶೆಟ್ಟಿ, ಎ.ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.


