ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಅದು ಈ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಜ್ಞಾನ ದೇಗುಲ. ಆದ್ರೆ ಇದೀಗ ಇಂಥದ್ದೊಂದು ಪ್ರತಿಷ್ಠಿತ ವಿವಿಯಲ್ಲಿ ಆತಂಕಕಾರಿ ವಿದ್ಯಮಾನವೊಂದು ನಡೆದು ಹೋಗಿದೆ. ವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ಮೊಬೈಲ್ ಕ್ಯಾಮಾರ ಇಟ್ಟು ರಹಸ್ಯ ಚಿತ್ರೀಕರಣಕ್ಕೆ ಮುಂದಾಗಿರೋದು ಬೆಳಕಿಗೆ ಬಂದಿದೆ. ಈ ಮೂಲಕ ವಿವಿ ಆವರಣದಲ್ಲೇ ಹೆಣ್ಮಕ್ಕಳ ಮರ್ಯಾದೆ ಹರಾಜು ಹಾಕೋ ಗಂಭೀರ ಪ್ರಕರಣಕ್ಕೆ ಮಂಗಳೂರು ವಿವಿ ಸಾಕ್ಷಿಯಾಗಿದೆ……
ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಸಾಲಿಗೆ ಸೇರೋ ವಿವಿಗಳಲ್ಲಿ ಮಂಗಳೂರು ವಿವಿ ಕೂಡ ಒಂದು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಗ್ಗಳಿಗೆ ಹೊಂದಿರೋ ಮಂಗಳೂರು ವಿವಿ ಇದೀಗ ಆತಂಕಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿವಿ ಅಂಗಳದಲ್ಲೇ ಹೆಣ್ಮಕ್ಕಳ ಮರ್ಯಾದೆಯನ್ನ ಹರಾಜು ಹಾಕೋ ಕೀಳು ಮಟ್ಟದ ಘಟನೆಯೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿವಿಯ ಬಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮಾರ ಇಟ್ಟು ರಹಸ್ಯವಾಗಿ ಚಿತ್ರೀಕರಿಸ್ತಾ ಇರೋದು ಬಹಿರಂಗವಾಗಿದೆ. ಅಸಲಿಗೆ ಘಟನೆ ನಡೆದು ವಾರಗಳೇ ಕಳೆದಿದ್ರೂ ಇದೀಗ ಪ್ರಕರಣ ಬಹಿರಂಗಗೊಂಡಿದೆ. ಕಳೆದ ಅಗಸ್ಟ್ 24ರಂದು ವಿದ್ಯಾರ್ಥಿನಿಯೊಬ್ಬಳು ಟಾಯ್ಲೆಟ್ ಗೆ ಹೋದಾಗ ಮೇಲ್ಭಾಗದ ಹಲಗೆಯ ಮೇಲೆ ಅನುಮಾನಸ್ಪದ ವಸ್ತುವೊಂದು ಕಂಡು ಬಂದಿದೆ. ಹೀಗಾಗಿ ಆಕೆ ಅದನ್ನ ಪರಿಶೀಲಿಸಿದಾಗ ಬಿಳಿ ಬಟ್ಟೆ ಸುತ್ತಿ ಅಲ್ಲಿ ಮೊಬೈಲ್ ಒಂದನ್ನ ಇಡಲಾಗಿತ್ತು. ಹೀಗಾಗಿ ಆಕೆ ಕೂಡಲೇ ಈ ವಿಚಾರವನ್ನ ಬಯೋ ಸೈನ್ಸ್ ವಿಭಾಗದ ಮುಖ್ಯಸ್ಥೆ ತಾರಾವತಿಯವ್ರ ಗಮನಕ್ಕೆ ತಂದಿದ್ದಾಳೆ. ಅದ್ರಂತೆ ತಾರಾವತಿ ಮೊಬೈಲ್ ನ್ನ ಪಡೆದು ಪರಿಶೀಲಿಸಿ ನಂತರ ಅದನ್ನ ವಿವಿಯ ಕುಲಸಚಿವ ಲೋಕೇಶ್ ಅವ್ರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿ ನೀಡಿದ ಮಾಹಿತಿಯಂತೆ ಈ ಬಗ್ಗೆ ಕುಲಸಚಿವರಿಗೆ ದೂರು ನೀಡಿದ್ದಾರೆ.
ಅಸಲಿಗೆ ಟಾಯ್ಲೆಟ್ ನ ಮೇಲ್ಭಾಗದಲ್ಲಿ ಹಲಗೆಯ ರೀತಿಯ ಮುಚ್ಚಳವಿದೆ. ಇದೇ ಹಲಗೆಗೆ ಕನ್ನ ಕೊರೆದು ಯಾರಿಗೂ ತಿಳಿಯದಂತೆ ಅದ್ರಲ್ಲಿ ಬಿಳಿ ಬಟ್ಟೆ ಸುತ್ತಿ ಮೊಬೈಲ್ ಇಡಲಾಗಿತ್ತಂತೆ. ಅಲ್ಲದೇ ಲಾಂಗ್ ಬ್ಯಾಟರಿ ಬ್ಯಾಕಪ್ ಗಾಗಿ ಅದ್ರಲ್ಲಿ ಪವರ್ ಬ್ಯಾಂಕ್ ಕೂಡ ಇದ್ದು, ಸಿಮ್ ಕಾಡ್ ್ ಇಲ್ಲದ ಇಂಟೆಕ್ಸ್ ಮೊಬೈಲನ್ನ ಕೃತ್ಯಕ್ಕೆ ಬಳಸಲಾಗಿದೆ. ಅಲ್ಲದೇ ವಿದ್ಯಾರ್ಥಿನಿ ನೋಡಿದಾಗ ಅದಾಗಲೇ ಒಂದಷ್ಟು ದೃಶ್ಯಗಳನ್ನ ಚಿತ್ರೀಕರಿಸಿ ಮೊಬಯಲ್ ನಲ್ಲಿ ಪಾರ್ವರ್ಡ್ ಮಾಡಲಾಗಿದ್ದು, ಉಳಿದ ಒಂಧಷ್ಟು ದೃಶ್ಯಗಳು ರೆಕಾರ್ಡ್ ಆಗಿರೋದು ಗಮನಕ್ಕೆ ಬಂದಿದೆ. ಇನ್ನು ದೂರು ಪಡೆದ ಕುಲಸಚಿವ ಲೋಕೇಶ್ ಉಪಕುಲಪತಿ ಸೂಚನೆಯಂತೆ ಅಗಸ್ಟ್ 25ರಂದೇ ಸ್ಪರ್ಶ್ ಅನ್ನೋ ಆಂತರಿಕ ತನಿಖಾ ಸಮಿತಿ ರಚಿಸಿದ್ದಾರೆ. ಅಲ್ಲದೇ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅಗಸ್ಟ್ 28ರಂದು ಸಮಿತಿ ವರದಿ ನೀಡಿದೆ. ಆದ್ರೆ ಉಪಕುಲಪತಿಗಳು ದೆಹಲಿಗೆ ತೆರಳಿದ್ದ ಕಾರಣ ಇನ್ನಷ್ಟು ವಿಳಂಬವಾಗಿದೆ. ಆದ್ರೆ ಸದ್ಯ ಉಪಕುಲಪತಿಗಳು ದೆಹಲಿಯಿಂದ ಆಗಮಿಸಿದ್ದಾರೆ. ಅಲ್ಲದೇ ಸಮಿತಿ ಕೂಡ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಲು ಸಾಧ್ಯವಾಗದೇ ತನಿಖೆಯನ್ನ ಪೊಲೀಸ್ ಇಲಾಖೆಗೆ ಒಪ್ಪಿಸುವಂತೆ ಶಿಫಾರಸ್ಸು ಮಾಡಿದೆ. ಅಲ್ಲದೇ ಈ ಇಡೀ ಪ್ರಕರಣದಲ್ಲಿ ಕ್ಯಾಮಾರ ಇಟ್ಟ ಆರೋಪಿಯ ಬಗ್ಗೆ ಸುಳಿವಿಲ್ಲದಿರೋದು ಮತ್ತು ಇದೊಂದು ಸೈಬರ್ ಕ್ರೈಂ ಪ್ರಕರಣವಾಗಿರೋ ಕಾರಣದಿಂದ ವಿವಿ ಆಡಳಿತ ಪ್ರಕರಣವನ್ನ ಪೊಲೀಸ್ ತನಿಖೆಗೆ ವಹಿಸಲು ನಿರ್ಧರಿಸಿದೆ.
ಇನ್ನು ಇಷ್ಟು ದೊಡ್ಡ ಘಟನೆ ನಡೆದು ವಾರವೇ ಕಳೆದಿದ್ರೂ ವಿವಿ ಆಡಳಿತ ಮಾತ್ರ ಆಂತರಿಕ ತನಿಖೆ ನಡೆಸಿ ಸುಮ್ಮನಾಗಿದೆ. ಆದ್ರೆ ಇದೀಗ ಪ್ರಕರಣ ಬೀದಿಗೆ ಬರ್ತಾ ಇದ್ದಂತೆ ಎಚ್ಚೆತ್ತುಕೊಂಡ ವಿವಿ ಆಡಳಿತ ಪೊಲೀಸ್ ಠಾಣೆ ಮೆಟ್ಟಿಲು ಹತ್ತೋಕೆ ಮುಂದಾಗಿದೆ. ಆದ್ರೆ ಹೆಣ್ಮಕ್ಕಳೇ ಹೆಚ್ಚಾಗಿರೋ ಬಯೋ ಸೈನ್ಸ್ ವಿಭಾಗದಲ್ಲಿ ಟಾಯ್ಲೆಟ್ ಗೆ ಬಂದು ಮೊಬೈಲ್ ಇಟ್ಟಿದ್ದು ಯಾರು ಅನ್ನೋದೇ ಸದ್ಯದ ಕುತೂಹಲ. ಅಲ್ಲದೇ ಈಗಾಗಲೇ ಚಿತ್ರೀಕರಣವಾಗಿರೋ ದೃಶ್ಯಾವಳಿಗಳು ಕೂಡ ಮೊಬೈಲ್ ನಲ್ಲಿ ಹರಿದಾಡ್ತಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಪೋಲೀಸರಿಗೆ ಮಾಹಿತಿ ನೀಡಲಾಗಿದೆ. ಒಟ್ಟಾರೆ ವಿವಿ ಅಂಗಳದಲ್ಲೇ ಇಂಥದ್ದೊಂದು ಘಟನೆ ನಡೆದಿರೋದು ವಿದ್ಯಾರ್ಥಿನಿಯರನ್ನ ಆತಂಕಕ್ಕೆ ತಳ್ಳಿದೆ…


