ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಅಬ್ಬಕ್ಕನ ನಾಡು ಇಂದು ಅಕ್ಷರಶಃ ಕೇಸರಿ ಪಡೆಯ ತಿರಂಗ ಯಾತ್ರೆಯಲ್ಲಿ ಮುಳುಗಿ ಹೋಗಿತ್ತು. ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಶಾ ಆಗಮನದ ಮೂಲಕ ಕಡಲತಡಿ ದೇಶಭಕ್ತರ ಬಲಿದಾನ ಸ್ಮರಣೆಗೆ ಸಾಕ್ಷಿಯಾಗಿತ್ತು. ಒಂದಷ್ಟು ವಿರೋಧದ ಮಧ್ಯೆಯೂ ಅದ್ದೂರಿಯಾಗಿ ನಡೆದ ತಿರಂಗ ಯಾತ್ರೆಯಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕಳಿಗೆ ಸಂಭ್ರಮದ ಗೌರವ ಸಲ್ಲಿಕೆಯಾಗಿದೆ. ಕೇಸರಿ ಪಡೆ ಬಿಜೆಪಿ ಧ್ವಜ ತ್ಯಜಿಸಿ ಮೋದಿ ಆಶಯದಂತೆ ತ್ರಿವರ್ಣ ಧ್ವಜದಡಿ ದೇಶಭಕ್ತಿ ಮೆರೆದಿದೆ…..
ದೇಶದ ಪ್ರಧಾನಿ ನರೇಂದ್ರ ಮೋದಿಯ ಆಶಯಕ್ಕೆ ತಕ್ಕಂತೆ ಕಡಲತಡಿಯ ಅಬ್ಬಕ್ಕನ ನಾಡಲ್ಲಿ ಇಂದು ಅದ್ದೂರಿ ತಿರಂಗ ಯಾತ್ರೆ ಸಮಾವೇಶ ನಡೆದಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವ್ರೇ ಸ್ವತಃ ಅಬ್ಬಕ್ಕನ ನಾಡಾದ ಉಳ್ಳಾಲಕ್ಕೆ ಆಗಮಿಸೋ ಮೂಲಕ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದ್ದಾರೆ. ಗೋವಾದಿಂದ ಮಂಗಳೂರಿಗೆ ಆಗಮಿಸಿದ ಶಾ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟು ಸಾಂಕೇತಿಕವಾಗಿ ಗಿಡ ನೆಟ್ರು. ನಂತ್ರ ಅಲ್ಲಿಂದ ನೇರವಾಗಿ ಪಂಪ್ ವೆಲ್ ವೃತ್ತದಲ್ಲಿ ಬೃಹತ್ ಬೈಕ್ ಜಾಥಕ್ಕೆ ಚಾಲನೆ ಕೊಟ್ಟ ಶಾ ಅಲ್ಲಿಂದ ನೇರವಾಗಿ ಉಳ್ಳಾಲಕ್ಕೆ ಆಗಮಿಸಿದ ರಾಣಿ ಅಬ್ಬಕ್ಕನ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದ್ಧಾರೆ. ಈ ವೈಭವೋಪೆತವಾಗಿ ಸಿಂಗರಿಸಲ್ಪಟ್ಟ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪನೆ ಮಾಡೋ ಮೂಲಕ ಶಾ ಗೌರವ ಸಲ್ಲಿಸಿದ್ದಾರೆ. ನಂತ್ರ ಅಲ್ಲಿಂದ ಬಿಗಿ ಭದ್ರತೆಯ ಮಧ್ಯೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣದಲ್ಲಿ ನಡೆದ ತಿರಂಗ ಯಾತ್ರೆ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಅನೇಕ ರಾಜ್ಯ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಹೊಂಡಿದ್ರು. ಕಾರ್ಯಕ್ರವನ್ನ ದೀಪ ಬೆಳಗಿಸೋ ಮೂಲಕ ಉದ್ಘಾಟಿಸಿದ ಅಮಿತ್ ಶಾ, ಸಮಾವೇಶದಲ್ಲಿ ನೆರೆದಿದ್ದ ಜನ್ರನ್ನ ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ತನ್ನ ಭಾಷಣದ ಆರಂಭಕ್ಕೂ ಮುನ್ನ ಅಮಿತ್ ಶಾ ಯಡಿಯೂರಪ್ಪರನ್ನ ಭವಿಷ್ಯದ ಮುಖ್ಯಮಂತ್ರಿ ಅಂತಾನೆ ಸಂಭೋಧಿಸಿದ್ರು. ನಂತ್ರ ಮಾತು ಮುಂದುವರೆಸಿದ ಶಾ, ಹತ್ತು ವರ್ಷಕ್ಕಿಂದ ಮೊದಲು ದೇಶ ಪ್ರೇಮವನ್ನ ನೋಡುವ ದೃಷ್ಟಿಯೇ ಬದಲಾಗಿತ್ತು. ಆದ್ರೆ ಇದೀಗ ಜಗತ್ತೇ ಭಾರತದತ್ತ ನೋಡೋ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಮೋದಿ ಆಡಳಿತವನ್ನ ತನ್ನ ಭಾಷಣದುದ್ದಕ್ಕೂ ಶ್ಲಾಘಿಸಿದ್ರು….
ಇನ್ನು ಬೆಳಿಗ್ಗೆ 4.30ಕ್ಕೆ ಗೋವಾದಿಂದ ಮಂಗಳೂರಿಗೆ ಅಮಿತ್ ಶಾ ರೈಲಿನ ಮೂಲಕ ಆಗಮಿಸಿ ನಗರದ ಸರ್ಕೂಟ್ ಹೌಸ್ ನಲ್ಲಿ ತಂಗಿದ್ರು. ಆದ್ರೆ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಶಾಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಸ್ವಾಗತ ನೀಡಿದ್ರು. ಬಿಗು ಪೊಲೀಸ್ ಬಂದೋಬಸ್ತ್ ಇದ್ರೂ ಯುವ ಕಾಂಗ್ರೆಸ್ ಪಡೆ ನಕಲಿ ಗೋರಕ್ಷರನ್ನ ಮೋದಿ ರಕ್ಷಿಸ್ತಾ ಇದಾರೆ ಅಂತ ಆರೋಪಿಸಿ ಅಮಿತ್ ಶಾ ವಿರುದ್ದ ಪ್ರತಿಭಟನೆ ನಡೆಸಿದ್ರು. ಆದ್ರೆ ಪೊಲೀಸರು ಅವ್ರನ್ನ ಬಂಧಿಸಿದ ಬಳಿಕ ಶಾ ತಮ್ಮ ಕಾರ್ಯಕ್ರಮವನ್ನ ಮುಂದುವರೆಸಿದ್ರು. ಇನ್ನು ಈ ಬಿಜೆಪಿಯೇ ಕಾರ್ಯಕ್ರಮವನ್ನ ಆಯೋಜಿಸಿದ್ರು ಕಟ್ಟುನಿಟ್ಟಾಗಿ ಬಿಜೆಪಿ ಧ್ವಜವನ್ನ ಬದಿಗಿಟ್ಟು ಕಾರ್ಯಕ್ರಮ ನಡೆಸಲಾಗಿತ್ತು. ಹೀಗಾಗಿ ಎಲ್ಲೂ ಬಿಜೆಪಿಯ ಬಾವುಟಗಳು ಕಂಡುಬರಲಿಲ್ಲ. ಆದ್ರೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಾತ್ರ ವಿವಿ ಆವರಣದಲ್ಲಿ ಈ ಕಾರ್ಯಕ್ರಮ ನಡೆಸೋದನ್ನ ನಿನ್ನೆಯೇ ವಿರೋಧಿಸಿದ್ದು, ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದೆ. ಹೀಗಿದ್ರೂ ಇಂದು ವಿವಿಯ ಮಂಗಳಾ ಸಭಾಂಗಣದಲ್ಲಿ ಅದ್ದೂರಿಯಾಗಿಯೇ ಕಾರ್ಯಕ್ರಮ ನಡೆದಿದೆ. ಇನ್ನು ರಾಷ್ಟ್ರೀಯ ಅಧ್ಯಕ್ಷರು ಸಮಾವೇಶಕ್ಕೆ ಆಗಮಿಸಿದ್ರೂ ಈಶ್ವರಪ್ಪ ಸೇರಿದಂತೆ ಕೆಲ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಇನ್ನು ಸಮಾವೇಶವನ್ನ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಕಳೆದ 70 ವರ್ಷಗಳಲ್ಲಿ ಯಾರೂ ಮಾಡದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೇಶಕ್ಕಾಗಿ ಬಲಿದಾನ ಮಾಡಿದವ್ರ ಸ್ಮರಣೆ ನಡೆದಿದೆ ಎಂದ್ರು.
ಒಟ್ಟಾರೆ ಒಂದಷ್ಟು ವಿರೋಧಗಳ ಮಧ್ಯೆಯೂ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ಮಧ್ಯೆ ಅಮಿತ್ ಶಾಗೆ ಝಡ್ ಪ್ಲಸ್ ಕ್ಯಾಟಗರಿ ಭದ್ರತೆಯಿರೋ ಕಾರಣ ಪೊಲೀಸ್ ಇಲಾಖೆ ಉಳ್ಳಾಲದಾದ್ಯಂತ ಬಿಗು ಭದ್ರತೆ ಏರ್ಪಡಿಸಿತ್ತು. ಜೊತೆಗೆ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಕೂಡ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದ್ರು. ಹೀಗಾಗಿ ದ.ಕ ಜಿಲ್ಲೆಯ ಮೂಲೆಮೂಲೆಗಳಿಂದ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ರು. ಒಟ್ಟಾರೆ ಇಡೀ ಕಾರ್ಯಕ್ರಮ ಒಂದಷ್ಟು ಗೊಂದಲದ ಮಧ್ಯೆಯೂ ಯಶಸ್ವಿಯಾಗಿ ನಡೆದಿದೆ.


