ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ, ಬಂಟ್ವಾಳದ ಹರೀಶ್ ಪೂಜಾರಿ ಕೊಲೆ , ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದವರು ನೇರ ಭಾಗಿಯಾಗಿದ್ದು, ಇದರ ವಿರುದ್ಧ ಪ್ರತಿಭಟಿಸದ ಬಿಜೆಪಿ ಪಕ್ಷದವರಿಗೆ ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಭಟಿಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟು ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಅವರು ಹೇಳಿದ್ದಾರೆ.
ಎಂ.ಕೆ.ಗಣಪತಿ ಉಳ್ಳಾಲದಲ್ಲಿ ಎಸ್.ಐ ಆಗಿ ಜಿಲ್ಲೆಯಾದ್ಯಂತ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಿದವರು. ಮುಖ್ಯಮಂತ್ರಿಗಳು ಪ್ರಕರಣವನ್ನು ಶೀಘ್ರವೇ ಸಿಓಡಿಗೆ ವಹಿಸಬೇಕು. ಆದರೆ ಅವರ ಅಂತಿಮ ಸಂಸ್ಕಾರದ ವೇಳೆ ಮೃತದೇಹವನ್ನು ಪತ್ನಿ ಹಾಗೂ ಕುಟುಂಬಸ್ಥರ ಮುಂದೆಯೇ ಎರಡು ಗಂಟೆಗಳ ಕಾಲ ರಸ್ತೆ ಬದಿಯಲ್ಲಿಟ್ಟು ಜವಾಬ್ದಾರಿಯುತ ಶಾಸಕರ ಸಮ್ಮುಖದಲ್ಲಿ ಇರಿಸಿ ಪ್ರತಿಭಟಿಸಿರುವುದು ಸಮಂಜಸವಲ್ಲ. ಸಿಬಿಐ ಗೆ ಕೊಟ್ಟಂತಹ ಪ್ರಕರಣಗಳು ಎಲ್ಲವೂ ಹಳ್ಳ ಹಿಡಿದಿರುವುದರಿಂದ ಗಣಪತಿ ಪ್ರಕರಣವನ್ನು ಅವರಿಗೆ ವಹಿಸುವುದರಲ್ಲಿ ಪ್ರಯೋಜನವಿಲ್ಲ.
ಬಿಜೆಪಿ ಬೆಂಬಲಿತ ಸಂಘಪರಿವಾರದವರು ನಡೆಸಿರುವಂತಹ ವಿನಾಯಕ ಬಾಳಿಗಾ ಕೊಲೆ, ಬಂಟ್ವಾಳದ ಹರೀಶ್ ಕೊಲೆ, ಕುಂದಾಪುರ ಶಾಲಾ ಮಕ್ಕಳ ಸಾವನ್ನೂ ಧರ್ಮದ ಆಧಾರದಲ್ಲಿ ನೋಡಿದ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಯಾಕೆ ಒತ್ತಾಯಿಸುತ್ತಿಲ್ಲ. ಎಂ.ಕೆ.ಗಣಪತಿ ಅವರನ್ನು ಐದು ಬಾರಿ ಸಸ್ಪೆಂಡ್ ಆಗಿದ್ದಾರೆ. ಆದರೂ ಸರಕಾರ ಅವರನ್ನು ಡಿವೈಎಸ್ಪಿಯಾಗಿ ಪ್ರಮೋಷನ್ ಕೊಟ್ಟಿರವುದು ದೊಡ್ಡ ಸಂಗತಿ. ಆದರೆ ಕಾನೂನು ಪ್ರಕಾರ ಅವರಿಗೆ ಯಾವುದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗರು ಅರ್ಥವಿಲ್ಲದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ನಗರಸಭೆ ಸದಸ್ಯ ದಿನೇಶ್ ರೈ, ಬ್ಲಾಕ್ ಕಾರ್ಯದರ್ಶಿ ಸುರೇಶ್ ಭಟ್ನಗರ, ಹಿಂದುಳಿದ ವರ್ಗಗಳ ಅಧ್ಯಕ್ಷ ದಿನೇಶ್ ಕುಂಪಲ, ಪ್ರಕಾಶ್ ಪಿಂಟೋ, ಪವನರಾಜ್ ಮೊದಲಾದವರು ಉಪಸ್ಥಿತರಿದ್ದರು.


