ಉಳ್ಳಾಲ: ಆಧುನಿಕ ಭಾರತ ನಿರ್ಮಾಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಅವರು ಕೇವಲ ದಲಿತ ಸಮುದಾಯದ ನಾಯಕರು ಮಾತ್ರ ಅಲ್ಲ ಅವರು ಇಡೀ ದೇಶದ ಜನರ ನಾಯಕರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಭಾರತ ಸರಕಾರದ ಯೋಜನಾ ಆಯೋಗದ ಮಾಜಿ ಸದಸ್ಯ ಪ್ರೊ.ಬಿ.ಎಲ್.ಮುಂಗೇಕರ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಎಸ್ಸಿ, ಎಸ್ಟಿ ಸೆಲ್ ಇದರ ಆಶ್ರಯದಲ್ಲಿ ಸೋಮವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ `ಆಧುನಿಕ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಅಸ್ಪ್ರಶ್ಯತೆಯ ನಿವಾರಣೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವಾರು ರೀತಿಯಲ್ಲಿ ಹೋರಾಟ ನಡೆಸಿ ಸಮಾನತೆ ಮತ್ತು ಅಭಿವೃದ್ದಿಗಾಗಿ ಪಣತೊಟ್ಟಿದ್ದರು. ಆದರೂ ದೆಹಲಿ, ಮುಂಬಾಯಿ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ಅಸ್ಪ್ರಶ್ಯತೆಯ ಸಮಸ್ಯೆ ಕಡಿಮೆ ಇದ್ದರೂ ಕೆಲವು ಗ್ರಾಮೀಣ ಭಾಗಗಳಲ್ಲಿ ಇನ್ನೂ ನೆಲೆನಿಂತಿರುವುದು ನಿಜಕ್ಕೂ ವಿಷಾಧನೀಯ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಶಿಕ್ಷಣವು ಗುಣಮಟ್ಟ ಇಂದು ಕಡಿಮೆಯಾಗುತ್ತಿರುವುದು ದುರಂತವಾಗಿದೆ. ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಸಾಮಾಜಿಕ ಬದಲಾಣೆ, ಸಮಾಜದ ಅಭಿವದ್ದಿಗೆ ಸಹಕಾರಿಯಾಗುವಂತಿರಬೇಕು. ಅಲ್ಲದೆ ವಿವಿಗಳು ಜ್ಞಾನ ತುಂಬುವ ಕೇಂದ್ರವಾಗಬೇಕು ಎಂದು ಹೇಳಿದರು. ಮಂಗಳೂರು ವಿವಿಯು 34ರ ಹರೆಯದ ವಿವಿಯದರೂ ಉತ್ತಮ ಸಾಧನೆಯೊಂದಿಗೆ ಗುರುತಿಸಿಕೊಂಡಿರುವುರು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಮಂಗಳೂರು ವಿಶ್ವವಿದ್ಯಾನಿಲಯವು ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯನ್ನು ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶಿಷ್ಟವಾಗಿ ಆಚರಿಸಿ ಅಂಬೇಡ್ಕರ್ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಎಲ್.ಮುಂಗೇಕರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು, ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರೊ.ವಿಶ್ವನಾಥ್, ಮಂಗಳೂರು ವಿವಿ ಎಸ್ಸಿ, ಎಸ್ಟಿ ಸೆಲ್ನ ಸಬಿತಾ ಮುಂತಾದವರು ಉಪಸ್ಥಿತರಿದ್ದರು.


