ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಜನಾಡಿ: ರಾಜ್ಯದಲ್ಲಿಯೇ ಮೊದಲ ಬಾರಿ ಮಂಜನಾಡಿ ಪಂಚಾಯಿತಿಗೆ ಉಳಿದ ಪಂಚಾಯಿತಿಗಳಿಗಿಂತ ಹೆಚ್ಚುವರಿ ಅನುದಾನ ಮಂಜೂರಾಗಿದ್ದು, ಇದು ಹೆಚ್ಚು ಜನಸಂಖ್ಯೆ ಇರುವ ಮಂಜನಾಡಿ ಗ್ರಾಮದ ಅಭಿವೃದ್ಧಿಗೆ ಸಚಿವರ ಶ್ರಮದಿಂದ ದೊರೆತ ಕೊಡುಗೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಭಿಯಂತರ ಎ.ಯಸ್.ರಾವ್ ಅಭಿಪ್ರಾಯಪಟ್ಟರು.
ಅವರು ಮಂಜನಾಡಿ ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಯೋಜನೆ ಬಗ್ಗೆ ಮಂಜನಾಡಿಯ ಮಂಗಳಾಂತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಜರಗಿದ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಪಂಚಾಯಿತಿಗೆ ರೂ. 75 ಲಕ್ಷ ಅನುದಾನ ಮಂಜೂರಾಗಿದೆ. ಆದರೆ ಮಂಜನಾಡಿ ಪಂಚಾಯಿತಿಗೆ ರೂ. 1.5 ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿದೆ. ಇದು ಹೆಚ್ಚು ಜನಸಂಖ್ಯೆ ಇರುವ ಮಂಜನಾಡಿ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಗ್ರಾಮದ ಜನರ ಪ್ರಸ್ತಾವನೆ ಪಡೆದು ಶಾಸಕರು ರಾಜ್ಯದಲ್ಲಿ ಪ್ರಥಮ ಬಾರಿ ಒಂದು ಪಂಚಾಯಿತಿಗೆ ದೊಡ್ಡ ಮೊತ್ತದ ಅನುದಾನವನ್ನು ದೊರಕಿಸಿದ್ದಾರೆ. ಸರಕಾರ ಸಾಮಾಜಿಕ ಆಡಿಟ್ ಅನ್ನುವ ಕಾನೂನು ಜಾರಿಗೆ ತಂದಿದ್ದು, ಇದರಲ್ಲಿ ಜನರೇ ಅನುದಾನಗಳ ಸಮಗ್ರ ವರದಿಯನ್ನು ಸಂಗ್ರಹಿಸಬಹುದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಗ್ರಾಮ ವಿಕಾಸ ಯೋಜನೆಗಳ ಮಾಹಿತಿ ನೀಡಿ ಪಂಚಾಯಿತಿಗೆ ಬಂದಿರುವ ಅನುದಾನದಲ್ಲಿ ಶೇ.12 ಸಭಾಭವನ, ಶೇ.12 ಯುವಕ-ಯುವತಿ ಮಂಡಳಿಗಳ ಕ್ರೀಡಾ ಚಟುವಟಿಕೆ, ಶೇ.3 ಸೋಲಾರ್ ಮತ್ತು ಎಲ್.ಇ.ಡಿ ಬೀದಿ ದೀಪ, ಶೇ.10 ಘನತ್ಯಾಜ್ಯ ಘಟಕ, ಶೇ.2 ಪಂಚಾಯಿತಿಗೆ ವೀಡಿಯೋ ಮತ್ತು ಪ್ರಾಜೆಕ್ಟರ್ , ಶೇ.6 ಗುಡಿ, ಮಸೀದಿ, ಚರ್ಚುಗಳಿಗೆ ಜೀರ್ಣೋದ್ಧಾರ ಕಟ್ಟಡ ನಿರ್ಮಾಣ, ಶೇ.5 ವಿವೇಚನಾ ಅನುದಾನ ಹಾಗೂ ಶೇ.25 ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮಂಜೂರುಗೊಳಿಸಲು ಸರಕಾರದ ಆದೇಶ ಇದೆ ಎಂದರು.
ಮಂಜನಾಡಿ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮರಿಯಮ್ಮ, ಪಂಚಾಯಿತಿ ಅಭಿಯಂತರ ರಾಧಾಕೃಷ್ಣ ಉಪಸ್ಥಿತರಿದ್ದರು.
ಲೆಕ್ಕಸಹಾಯಕ ಮಂಜಪ್ಪ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


