ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ:ಅಂಗಾಂಗ ಕಸಿ ಕ್ರಿಯೆ ಪ್ರಕ್ರಿಯೆಯಲ್ಲಿ ಸರಕಾರದ ಜತೆಗೆ ಝೋನಲ್ ಕೋ ಆರ್ಡಿನೇಷನ್ ಕಮಿಟಿ ಆಫ್ ಕರ್ನಾಟಕ ಕೈಜೋಡಿಸುವ ಮೂಲಕ ಅನೇಕ ಆಸ್ಪತ್ರೆಗಳನ್ನು ನೋಂದಾಯಿಸಿಕೊಂಡಿದ್ದು, ಈ ಮೂಲಕ ಅಂಗಾಂಗ ಇಲ್ಲದವರ ಬಾಳಿನಲ್ಲಿ ಬೆಳಕಾಗಿದೆ ಎಂದು ಬೆಂಗಳೂರು ಝೆಡ್ ಸಿಸಿಕೆ ಇದರ ಕಾರ್ಯಕಾರಿಣಿ ಸದಸ್ಯ ಹಾಗೂ ಕಿಮ್ಸ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಡಾ.ಜಿ.ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಿಟೋರಿಯಂನಲ್ಲಿ ಗುರುವಾರ ಜರಗಿದ ವಿಶ್ವ ಮೂತ್ರಕೋಶ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ ವಿಜಯ ಕುಮಾರ್ ಮಾತನಾಡಿ ರೋಗದ ಕುರಿತ ತಪಾಸಣೆ ಅಗತ್ಯ , ಕಾಲದಲ್ಲಿ ಪರಿಶೀಲನೆ ನಡೆಸುವ ಮೂಲಕ ರೋಗದ ಪತ್ತೆಹಚ್ಚುವಿಕೆಯಿಂದ ಪೂರ್ವ ಚಿಕಿತ್ಸೆಯನ್ನು ನಡೆಸುವುದರೊಂದಿಗೆ ಕಾಯಿಲೆಗಳನ್ನು ದೂರವಾಗಿಸಬಹುದು. ಆಸ್ಪತ್ರೆಗಳು ಉಚಿತ ಪರಿಶೀಲನೆಗೆ ಸಿದ್ಧವಾಗಿದ್ದರೂ, ಜನರು ಅದರ ಸದುಪಯೋಗ ಪಡೆಯುತ್ತಿಲ್ಲ. ಚಿಂತನೆಗಳನ್ನು ಬದಲಾಯಿಸಿ ರೋಗದ ಪರಿಶೀಲನೆ ಕುರಿತು ಜನ ಹೆಚ್ಚಿನ ಒಲವು ನೀಡುವ ಅರಿವು ಆಸ್ಪತ್ರೆಗಳಿಂದ ಆಗಬೇಕಿದೆ ಎಂದರು.
ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ವಿವಿಧ ವಿಧಾನಗಳಿವೆ. ಇದರಲ್ಲಿ ಹಗರಣಗಳು, ನಿರ್ಬಂಧಗಳು ಇಲ್ಲದೇ ಆಗುವುದು ಶವದ ಕಸಿ ಪ್ರಕ್ರಿಯೆ ಮಾತ್ರ. ಮೆದುಳು ಸ್ತಬ್ದಗೊಂಡವರ 8 ರಿಂದ 10 ರಷ್ಟು ಅಂಗಾಂಗಳನ್ನು ದಾನ ಮಾಡಬಹುದು. ದಾನ ಪ್ರಕ್ರಿಯೆಯಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದ್ದರೆ, ದ್ವಿತೀಯ ಕೇರಳ ಮತ್ತು ತೃತೀಯ ಸ್ಥಾನ ಕರ್ನಾಟಕಕ್ಕಿದೆ. ಝೋನಲ್ ಕೋ ಆರ್ಡಿನೇಷನ್ ಕಮಿಟಿ ಆಫ್ ಕರ್ನಾಟಕ ಸರಕಾರದ ಸಹಕಾರದೊಂದಿಗೆ 28 ಜಿಲ್ಲಾ ಆಸ್ಪತ್ರೆ ಗಳಲ್ಲಿ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. 42 ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. 2008-09 ರಲ್ಲಿ ಕರ್ನಾಟಕ ಸರಕಾರ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಿದ ರೀತಿಯಲ್ಲಿ ಸದ್ಯ ಕೇಂದ್ರ ಸರಕಾರವೂ ಅಂತಹ ಯೋಜನೆಗಳಿಗೆ ಕೈ ಹಾಕಿರುವುದು ಶ್ಲಾಘನೀಯ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ತಲೆಗೆ ಗಾಯಗೊಂಡ ರೋಗಿಗಳು ಅನೇಕರಿದ್ದು, ಆಸ್ಪತ್ರೆ ಝೆಡ್ ಸಿಸಿಕೆ ಜತೆ ನೋಂದಾವಣೆಗೊಂಡಿರುವುದರಿಂದ ಅಂಗಾಂಗ ದಾನ ಇಲ್ಲಿ ಅನೇಕ ನಡೆಯುತ್ತಿದ್ದು, ರಾಜ್ಯದ ಬಹುತೇಕ ಆಸ್ಪತ್ರೆಗಳು ಸಂಘದೊಂದಿಗೆ ನೋಂದಾವಣೆಗೊಂಡಿದೆ. ಇನ್ನಷ್ಟು ಆಸ್ಪತ್ರೆಗಳು ನೋಂದಾವಣೆಗೊಳ್ಳುವ ಮೂಲಕ ಅಂಗಾಂಗದ ಮೊರೆ ಇರುವವರಿಗೆ ಬೆಳಕಾಗಬೇಕಿದೆ ಎಂದರು.
ಈ ಸಂದರ್ಭ ಕುಲಸಚಿವ ಡಾ.ಸಿ.ವಿ.ರಘುವೀರ್, ಪ್ರಾಂಶುಪಾಲ ಡಾ. ಗುಲಾಂ ಜೀಲಾನಿ ಖಾದಿರಿ, ಮೂತ್ರಕೋಶ ವಿಭಾಗ ಮುಖ್ಯಸ್ಥ ಡಾ. ಮುಜೀಬುರ್ರೆಹಮಾನ್, ಮಂಗಳೂರು ಯುನಿಟಿ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಆಡಳಿತ ನಿರ್ದೇಶಕ ಡಾ.ಹಬೀಬ್ ರೆಹಮಾನ್, ನೆಫ್ರಾಲಜಿ ವಿಭಾಗ ಮುಖ್ಯಸ್ಥ ಡಾ.ಸಮತೋಷ್ ಪೈ, ಡಾ,ಅಲ್ತಾಫ್ ಖಾನ್, ಡಾ.ನಿಶ್ಚಿತ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮೊಹಮ್ಮದ್ .ಎ.ವಣಿ ಸ್ವಾಗತಿಸಿದರು. ಡಾ.ಮಹಮ್ಮದ್ ಗುತ್ತಿಗಾರ್ ವಂದಿಸಿದರು. ಡಾ.ರೋಷೆಲ್ ಕಾರ್ಯಕ್ರಮ ನಿರ್ವಹಿಸಿದರು.


