ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: : ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಲು ನೀಡುವುದರ ಬದಲು ಗೇರುಹಣ್ಣಿನ ರಸ (ಜ್ಯೂಸ್) ವನ್ನು ನೀಡಿ . ಇದರಿಂದ ಗೇರುಹಣ್ಣಿಗೆ ಜಿಲ್ಲೆಯಲ್ಲೂ ಅಧಿಕ ಬೇಡಿಕೆ ದೊರೆಯುವುದಲ್ಲದೆ ಹಾಳಾಗುವ ಹಣ್ಣುಗಳ ಸದುಪಯೋಗವನ್ನು ಮಾಡಬಹುದು. ಸರಕಾರದ ಜತೆಗೆ ಚರ್ಚಿಸಿ ಇಂತಹ ಯೋಜನೆಯನ್ನು ಚಾಲನೆಗೆ ತರಲು ಪ್ರಯತ್ನಿಸಲಾಗುವುದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ ಅಭಿಪ್ರಾಯಪಟ್ಟರು.

ಉಳ್ಳಾಲ ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಗೇರು ಕೃಷಿ ಮೇಳ-2016, ಗೇರು ಕೃಷಿ ತರಬೇತಿ ಹಾಗೂ ಗೇರು ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಬಯಲು ಸೀಮೆ ಜನರಿಗೆ ನೀರು ಕೊಟ್ಟು ಉತ್ತಮ ಗೇರು ಬೆಳೆಗೆ ಪ್ರೋತ್ಸಾಹಿಸುವ ಕೆಲಸ ಸರಕಾರದಿಂದ ಆಗಿದೆ. ಆದರೆ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾದರೂ ಗೇರು ಬೆಳೆಯನ್ನು ಬೆಳೆಸುವವರ ಸಂಖ್ಯೆ ಕಡಿಮೆಯಿದೆ. ಗೇರು ಬೆಳೆಗೆ ಅಂತಾರಾಷ್ಟ್ರೀಯವಾಗಿ ಬೇಡಿಕೆಯಿದ್ದು, ಇದರಿಂದ ಉದ್ಯೋಗ ಅವಕಾಶವೂ ಹೆಚ್ಚಿದೆ. ತಾಂತ್ರಿಕ ಜ್ಞಾನ ನೀಡಿ ಹೆಚ್ಚು ಬೆಳೆ ಬೆಳೆಸುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ.
ಅದನ್ನು ರೈತರು ಒಪ್ಪಿಕೊಳ್ಳುವ ಮೂಲಕ ಲಾಭದಾಯಕ ಬೆಳೆಯನ್ನು ಬೆಳೆಸಬೇಕು. ಕರಾವಳಿಯಲ್ಲಿ ಸದ್ಯ 1 ಗಿಡಕ್ಕೆ ನಾಲ್ಕು ಕೆ.ಜಿ ಗೇರು ಬೆಳೆಯುತ್ತಿದ್ದರೆ, ಮುಂದೆ 10 ರಿಂದ 12ಕ್ಕೆ ಏರಿಕೆಯಾಗುವ ಸಲುವಾಗಿ ಕೇಂದ್ರದಿಂದ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗೇರು ಕೃಷಿಯೊಂದಿಗೆ ಅಂತರಬೆಳೆಯನ್ನು ಬೆಳೆಸುವುದರ ಮೂಲಕ ಹೆಚ್ಚಿನ ಲಾಭವನ್ನು ಗಳಿಸಬಹುದು. ಈಗಾಗಲೇ ಕೇಂದ್ರದಲ್ಲಿ ಸುವರ್ಣಗೆಡ್ಡೆ, ಹಣ್ಣುಗಳ ಅಂತರಬೆಳೆಯನ್ನು ಬೆಳೆಸಲಾಗುತ್ತಿದ್ದು, ರೈತರು ಅದನ್ನು ಪ್ರಯತ್ನಿಸಬೇಕಿದೆ. ಗೇರುಬೀಜದ ಸುಲಿದ ಸಿಪ್ಪೆಯಿಂದಲೂ ಎಣ್ಣೆ ತೆಗೆಯಬಹುದು. ಇದರಿಂದ ಗೇರು ಕುರಿತ ತಾಂತ್ರಿಕ ಮಾಹಿತಿ ಪಡೆದು ಉತ್ಪಾದನೆಗೆ ಹೆಚ್ಚು ಮಹತ್ವ ನೀಡಲು ರೈತರು ಪ್ರಯತ್ನಿಸಬೇಕಿದೆ ಎಂದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಕೆ.ವಿ. ಸುಧೀರ್ ಕಾಮತ್, ಬ್ರಹ್ಮಾವರ ಕೃಷಿ ವಿe್ಞÁನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಿ. ಧನಂಜಯ, ಸಹ ಪ್ರಾಧ್ಯಾಪಕಿ ಡಾ. ಭಾಗೀರಥಿ, ಸಹ ಪ್ರಾಧ್ಯಾಪಕರಾದ ಡಾ. ಭಾಗೀರಥಿ ಬ್ರಹ್ಮಾವರ, ಡಾ. ವಿನೋದ್ ಬ್ರಹ್ಮಾವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೇರುಕೃಷಿಯಲ್ಲಿ ಸಾಧನೆಗೈದ ಕೊಲ್ಲೂರಿನ ಗೇರು ಕೃಷಿಕ ಮೈಕೆಲ್ ರೋಡ್ರಿಗಸ್, ಪುತ್ತೂರು ಮಾಡ್ನೂರಿನ ಐತಪ್ಪ ನಾಯ್ಕ, ಮುಲ್ಕಿ ಕಿಲ್ಪಾಡಿಯ ಕೆನ್ಯೂಟ ಅರೋನ್ಹ, ಮಂಚಿ ಕೋಲ್ನಾಡಿನ ಶ್ಯಾಮಸುಂದರ್ ಶಾಸ್ತ್ರಿ, ಮಂಗಳೂರಿನ ಪ್ರಕೃತಿ ಫುಡ್ನ ಶ್ಯಾಮಲಾ ಶಾಸ್ತ್ರಿ ಹಾಗೂ ಅಬ್ದುಲ್ಲಾ ಅಜೀಝ್ ಕೊಲ್ಯ ಅವರನ್ನು ಸನ್ಮಾನಿಸಲಾಯಿತು.
ಸ್ನಾತಕೋತ್ತರ ಪದವಿ ಪಡೆದು, ಉಪನ್ಯಾಸಕ ವೃತ್ತಿ ಜೊತೆಗೆ ಜ್ಯೋತಿಷ್ಯ ಶಾಸ್ತ್ರಜ್ಞನಾಗಿದ್ದರೂ ಗೇರು ಕೃಷಿಯನ್ನೇ ಆರಿಸಿದ ಕುರಿತು ಹಾಗೂ ಗೇರುಕೃಷಿಯನ್ನು ಲಾಭದಾಯಕ ಕೃಷಿಯಾಗಿ ಹೇಗೆ ಬೆಳೆಯಬಹುದು ಎಂದು ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಗೇರುಬೆಳೆ ಕೃಷಿಕ ಶ್ಯಾಮಸುಂದರ್ ಶಾಸ್ತ್ರಿ ಅನುಭವ ಹಂಚಿಕೊಂಡರು.
ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ಲಕ್ಷ್ಮಣ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಕಂಕನಾಡಿ ಕೃಷಿ ವಿe್ಞÁನ ಕೇಂದ್ರದ ವಿe್ಞÁನಿ ಡಾ. ಹರೀಶ್ ಶೈಣೈ ವಂದಿಸಿದರು.





