ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಚೆಂಬುಗುಡ್ಡೆ: ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದ ಮೂವರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಿಂದ ಬಂಧಿಸಿದ್ದು, ಅವರಿಂದ 3,56,900 ರೂ. ಬೆಲೆಬಾಳುವ ಸೊತ್ತು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಚೆಂಬುಗುಡ್ಡೆಯ ಅಲ್ವಿನ್ ಕಿರಣ್ ಮೊಂತೇರೋ(32), ಉಳ್ಳಾಲ ಹೊಯಿಗೆಗದ್ದೆ ಮನೆಯ ಇನ್ನಾಸ್ ಡಿಸೋಜಾ(41) ಮತ್ತು ಕುತ್ತಾರು ನಿವಾಸಿ ಗಿತೇಶ್ (37) ಎಂಬವರನ್ನು ಬಂಧಿಸಲಾಗಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಬಿಗ್ ಬ್ಯಾಶ್ 20-20 ಕ್ರಿಕೆಟ್ ಪಂದ್ಯಾಟದ ಸೋಲು ಗೆಲುವಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಂಬ ಅಕ್ರಮ ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಚೆಂಬುಗುಡ್ಡೆಯ ಮನೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ 13 ಮೊಬೈಲ್ ಫೋನ್, ಎಲ್ ಇಡಿ ಟಿ.ವಿ, ಬೆಟ್ಟಿಂಗ್ ವ್ಯವಹಾರಗಳ ಬಗ್ಗೆ ಬರೆದಿರುವ 3 ಡೈರಿಗಳು ಹಾಗೂ ನಗದು ಸೇರಿ ಒಟ್ಟು ರೂ.4 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಠಾಣೆಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


