ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಕುರ್ನಾಡು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಬಂಟ್ವಾಳ ತಾಲೂಕಿನ ಮೆಸ್ಕಾಂ ಉಪಕೇಂದ್ರ ಕಚೇರಿಯನ್ನು ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೊಳಿಯಾರ್ ಅವರು ಮಾತನಾಡಿ, ಮುಡಿಪು ಪ್ರದೇಶದಲ್ಲಿ ಮೆಸ್ಕಾಂ ಉಪಕೇಂದ್ರ ಕಚೇರಿ ನಿರ್ಮಾಣ ಆಗಬೇಕುನ್ನುವುದು ಈ ಭಾಗದ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕುರ್ನಾಡು ವ್ಯಾಪ್ತಿಯ ಮುಡಿಪು ಪ್ರದೇಶವು ಇತ್ತೀಚೆಗೆ ದಿನದಿಂದ ದಿನಕ್ಕೆ ಅಭಿವೃದ್ದಿ ಕಾಣುತ್ತಿದ್ದು, ಆದರೆ ಇಲ್ಲಿ ಮೆಸ್ಕಾಂ ಉಪ ಕಚೇರಿ ಇಲ್ಲದೆ ಜನರು ಬಹಳಷ್ಟು ತೊಂದರೆಯನ್ನು ಎದುರಿಸುತ್ತಿದ್ದರು. ಇದೀಗ ಕುರ್ನಾಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮೆಸ್ಕಾಂ ಉಪಕೇಂದ್ರ ಕಚೇರಿಯು ಕಾರ್ಯಾರಂಭಗೊಂಡಿದ್ದರಿಂದ ಕುರ್ನಾಡು, ನರಿಂಗಾನ, ಬಾಳೆಪುಣಿ,ಕೈರಂಗಳ ಹಾಗೂ ಇನ್ನಿತರ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯರಾದ ಟಿ.ಜಿ.ರಾಜಾರಾಂ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಇಂಜಿನಿಯರ್ ಜಿ.ನಾರಾಯಣ ಭಟ್ ಕೊಡಕ್ಕಲ್, ಉಪಾಧ್ಯಕ್ಷರಾದ ನಿತಿನ್ ಕುಮಾರ್ ಗಟ್ಟಿ, ಬಿಜೆಪಿ ಮುಖಂಡರಾದ ಶಕಿಲಾ, ಗೋಪಾಲ ಬಂಗೇರ, ವಿಶ್ವನಾಥ ಪೂಜಾರಿ, ವಿಕಾಸ್ ಎಂ, ಶಿವಶಂಕರ್ ಭಟ್, ಕುರ್ನಾಡು ಬಿಜೆಪಿ ಶಕ್ತಿ ಕೇಂದ್ರದ ನವೀನ್ ಪಾದಲ್ಪಾಡಿ, ಆನಂದ, ಗೀತ, ಪುಷ್ಪ ಮುಂತಾದವರು ಉಪಸ್ಥಿತರಿದ್ದರು.


