ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ರಾಜ್ಯ ಅಲ್ಪಸಂಖ್ಯಾತ ನಿಗಮದಿಂದ ಕ್ರೈಸ್ತ ಸಮುದಾಯಕ್ಕೆ ಕೊಡಮಾಡುವ ಶ್ರಮಶಕ್ತಿ ಸಾಲ 629 ಮಂದಿಗೆ ಹಾಗೂ ಕಿರುಸಾಲ 216 ಮಂದಿಗೆ ವಿತರಣೆ ಕಾರ್ಯಕ್ರಮ ಮಂಗಳವಾರ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ನರ ಚರ್ಚ್ ವಠಾರದಲ್ಲಿ ನಡೆಯಿತು.
ಫಲಾನುಭವಿಗಳಿಗೆ ಸಾಲ ವಿತರಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ವರ್ಷ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕೇವಲ ಮಂದಿ ಫಾಲನುಭವಿಗಳನ್ನು ಮಾತ್ರ ಆಯ್ಕೆ ಮಾಡಿತ್ತು. ಆದರೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಬೇಕು ಎಂದು ತಾನು ಒತ್ತಾಯಿಸಿದ ಪರಿಣಾಮ ಎಲ್ಲರಿಗೂ ಸಿಗುವಂತಾಗಿದೆ. ಈ ಮೂಲಕ ಸರ್ಕಾರದ ಸವಲತ್ತು ಜನಸಾಮಾನ್ಯರ ಕಾಲಬುಡಕ್ಕೆ ತಲುಪಿಸುವ ಪ್ರಯತ್ನ ಜನಪ್ರತಿನಿಧಿಗಳಿಂದ ನಡೆದಿದೆ. ಸಾಲ ಪಡೆದವರು ವ್ಯಾಪಾರ ಆರಂಭಿಸಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಂದರ್ಭ ಚರ್ಚ್‍ನ ಧರ್ಮಗುರು ಫಾ.ಜೆ.ಬಿ.ಸಲ್ದಾನ, ಉಳ್ಳಾಲ ನಗರಸಭೆ ಉಪಾಧ್ಯಕ್ಷ ರಝಿಯಾ ಇಬ್ರಾಹಿಂ, ಕೌನ್ಸಿಲರ್‍ಗಳಾದ ಫಾರೂಕ್ ಉಳ್ಳಾಲ್, ಬಾಜಿಲ್ ಡಿಸೋಜ, ಉಸ್ಮಾನ್ ಕಲ್ಲಾಪು, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ದಿನೇಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ನಿಗಮದ ಜಿಲ್ಲಾ ನಿರ್ದೇಶಕ ಎಸ್.ಡಿ.ಸೋಮಪ್ಪ ಸ್ವಾಗತಿಸಿದರು.


