ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಾವೂರು: ಕೋಟೆಕಾರ್‍ನಲ್ಲಿ ನಾದುರಸ್ಥಿಯಲ್ಲಿರುವ ಪ್ರಾಥಮಿಕ ಪಶು ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕಾಗಿ 22 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಶೀಘ್ರವೇ ಶಿಲಾನ್ಯಾಸ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಪಾವೂರು ಗ್ರಾಮ ಕಂಬಳಪದವಿನಲ್ಲಿ 26 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪಶು ಚಿಕಿತ್ಸಾಲಯ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಾವೂರು ಪಶು ಚಿಕಿತ್ಸಾಲಯದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಾಣಿಗಳು ಉಳಿದರೆ ಮಾತ್ರ ಜನಜೀವನ ಸುಲಲಿತವಾಗುತ್ತದೆ. ಸಾಕು ಪ್ರಾಣಿಗಳನ್ನು ಉಳಿಸುವುದು ಕ್ಲಿಷ್ಟಕರವಾಗಿದ್ದು ಇದಕ್ಕಾಗಿ ಚಿಕಿತ್ಸಾಲಯ ಅನಿವಾರ್ಯ. ಈಗಾಗಲೇ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದ್ದು ಪ್ರಾಣಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೆಲ್ವಿನ್ ಡಿಸೋಜ, ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್, ಉಪಾಧ್ಯಕ್ಷೆ ಲೀಲಾವತಿ ನಾಟ್ರಕೋಡಿ, ಸದಸ್ಯರಾದ ರುಪೀನಾ ಲೂವಿಸ್, ಮಹಮ್ಮದ್ ಇನೋಳಿ, ಮಾಜಿ ಸದಸ್ಯ ಮಹಮ್ಮದ್ ಬದ್ರಿಯಾ ನಗರ, ಬೋಳಿಯಾರ್ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಉಗ್ಗಪ್ಪ ಪೂಜಾರಿ, ಪಾವೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕೆ.ಎಸ್, ಇನೋಳಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮೋನು ಸ್ವಾಗತಿಸಿದರು.


