ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: `ಸತ್ಯ ಮಾತನಾಡುತ್ತೇನೆ, ಅದಕ್ಕಾಗಿ ಯಾರೂ ನನ್ನನ್ನು ಕಾರ್ಯಕ್ರಮಕ್ಕೆ ಕರೆಯುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳುವ ಮೂಲಕ ನೆರೆದ ಕಾಂಗ್ರೆಸ್ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡಿರುವ ಸನ್ನಿವೇಶ ಅಸೈಗೋಳಿಯ ಅಭಯಾಶ್ರಮದಲ್ಲಿ ಶುಕ್ರವಾರ ನಡೆಯಿತು.

ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಅಸೈಗೋಳಿಯ ಅಭಯಾಶ್ರಮ ವಾಸಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಸತ್ಯ ಮಾತನಾಡಿದರೆ ಒಳಿತಾಗುವುದಿಲ್ಲ ಬದಲು ಅವರು ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಸೋತು ಸತ್ತಿದ್ದೇನೆ. ಭಾಷಣದುದ್ದಕ್ಕೂ ಸತ್ಯವನ್ನೇ ಮಾತನಾಡುತ್ತೇನೆ. ಇದು ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡುತ್ತದೆ. ಬಳಿಕ ಅವರು ಹಿಂದೆಯಿಂದ ಬೈಯ್ಯುವುದೂ ಉಂಟು. ವಿಧಾನಸಭೆಗೆ ಸಲ್ಲದವರು ಕಾರ್ಯಕ್ರಮಗಳಿಗೂ ಸಲ್ಲದಂತಾಗಿದೆ. ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯುವುದನ್ನು ಬಿಟ್ಟಿದ್ದಾರೆ ಎಂದು ಹತಾಶೆ ವ್ಯಕ್ತಪಡಿಸಿದರು.
ನದಿ ತಿರುವು ಬಗ್ಗೆ ಸ್ವರ ಎತ್ತಬೇಕಿತ್ತು : ಆಶ್ರಮ ವಾಸಿಗಳಿಗೆ ನೀರಿನ ವ್ಯವಸ್ಥೆಯಿಲ್ಲ. ಇದು ಬೇಸರದ ಸಂಗತಿ. ಕೂಡಲೇ ಶಾಸಕರು ಹಾಗೂ ಸಚಿವರು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ಇದೆ. ಏನೂ ಇಲ್ಲದವರಿಗೆ ಶಕ್ತಿ ಕೊಡುವಂತಹ ರಾಜಧರ್ಮದ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು. ರಾಜ್ಯದುದ್ದಕ್ಕೂ ಸಂಚರಿಸಿ ನಿರಂತರ ಕಾರ್ಯಚಟುವಟಿಕೆಯಲ್ಲಿರುವ ಆರೋಗ್ಯ ಸಚಿವರು ರಾಜ್ಯದ ನಂ.1 ಸ್ಥಾನದಲ್ಲಿದ್ದಾರೆ. ತನ್ನ ಪುತ್ರನ ಸಮಾನಾಗಿರುವ ಸಚಿವರು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಸಂತಸದ ವಿಚಾರ. ಆದರೆ ಸೇವಾ ಕಾರ್ಯದಲ್ಲಿರುವ ಆಶ್ರಮ ವಾಸಿಗಳಿಗೆ ನೀರಿಲ್ಲದೇ ಇರುವ ಸ್ಥಿತಿಯಲ್ಲಿ ಕರಾವಳಿಯ ಜೀವನದಿ ನೇತ್ರಾವತಿಯನ್ನು ತಿರುಗಿಸಲು ಹೊರಟಿರುವ ವಿರುದ್ಧ ಸ್ವರ ಎತ್ತದೇ ಇರುವುದು ಬೇಸರದ ಸಂಗತಿ. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಉನ್ನತ ಹೆಸರು ಗಳಿಸಿರುವ ಸಚಿವರು ಮಂತ್ರಿ ಮಾತ್ರವಲ್ಲ ಮುಂದೆ ಉನ್ನತ ಸ್ಥಾನಕ್ಕೆ ಹೋಗುವುದು ಸತ್ಯ. ಅದರ ನಡುವೆ ನದಿ ತಿರುವು ಯೋಜನೆ ನಿಲ್ಲಿಸಿದಲ್ಲಿ ಅವರು ಹುಟ್ಟಿದ ಊರಿಗೆ ಮಾಡುವ ದೊಡ್ಡ ಸಾಧನೆ ಎಂದರು.
ಈ ವೇಳೆ ಸಮಾಜದಲ್ಲಿ ಶಾಂತಿ, ಪ್ರೀತಿ, ಸಹೋದರತೆಯಿಂದ ಬಾಳುವ ಪ್ರತಿಜ್ಞೆಯನ್ನು ಪೂಜಾರಿಯವರು ಆಶ್ರಮ ವಾಸಿಗಳು ಮತ್ತು ನೆರೆದ ಕಾರ್ಯಕರ್ತರಲ್ಲಿ ಹಾಕಿಸಿದರು.
ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎ.ಸಿ.ಭಂಡಾರಿ, ಎನ್.ಎಸ್.ಕರೀಂ, ಮುಖಂಡರಾದ ಸದಾಶಿವ ಉಳ್ಳಾಲ್, ತಾರನಾಥ್ ಶೆಟ್ಟಿ, ಅರುಣ್ ಕುವೆಲ್ಲೋ , ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್ ರೈ, ಅಂಬ್ಲಮೊಗರು ಪಂ.ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಬೋಳಿಯಾರು ಪಂ.ಅಧ್ಯಕ್ಷ ಅಬ್ದುಲ್ ಜಬ್ಬಾರ್, ಬೆಳ್ಮ ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಕಿನ್ಯಾ ಪಂ. ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಕೊಣಾಜೆ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ.ಯಸ್.ರಾವ್, ಸದಸ್ಯ ಮಹಮ್ಮದ್, ಬೆಳ್ಮ ಪಂ. ಮಾಜಿ ಸದಸ್ಯ ಯೂಸುಫ್ ಬಾವಾ ಮೊದಲಾದವರು ಉಪಸ್ಥಿತರಿದ್ದರು.























