ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಚೂರಿ ತೋರಿಸಿ ಕೊಲೆಗೆ ಯತ್ನಿಸಿದ್ದಲ್ಲದೆ ಅದನ್ನು ತಡೆಯಲು ಬಂದ ಇನ್ನೋರ್ವ ಪೊಲೀಸ್ ಸಿಬ್ಬಂದಿ ಚೂರಿಯಿಂದ ತಂಡವೊಂದು ಇರಿದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಳ್ಳಾಲದ ದರ್ಗಾ ಎದುರು ತಂಡವೊಂದು ಗಲಾಟೆ ನಡೆಸುತ್ತಿದ್ದುದನ್ನು ಕಂಡು ಪಿಸಿಆರ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಉಮೇಶ್ ಸಪಲ್ಯ ಮತ್ತು ರವೀಂದ್ರ ಎಂಬವರು ಪ್ರಶ್ನಿಸಿದ್ದರು. ಈ ವೇಳೆ ತಂಡದಲ್ಲಿದ್ದ ಮುಸ್ತಾಕ್, ಯಾಸೀನ್, ಅಶ್ರಫ್ ಸಮೋಸಾ, ಜಾಕಿ ಮತ್ತಿತರರು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಿಬ್ಬಂದಿ ಉಮೇಶ್ ಸಪಲ್ಯ ಎಂಬವರಿಗೆ ಚೂರಿಯಿಂದ ಎದೆ ಭಾಗಕ್ಕೆ ತಿವಿಯಲು ಮುಂದಾದಾಗ ಇನ್ನೋರ್ವ ಸಿಬ್ಬಂದಿ ರವೀಂದ್ರ ಅದನ್ನು ತಡೆದಿದ್ದರು. ಈ ವೇಳೆ ಮುಸ್ತಾಕ್ ಎಂಬಾತ ಅವರ ಕೈಯನ್ನು ತಿರುಗಿಸಿ ಕೈಗೆ ಚೂರಿಯಿಂದ ಇರಿದಿದ್ದಾನೆ. ಅಲ್ಲದೆ ತಂಡದಲ್ಲಿದ್ದ ಎಲ್ಲರೂ ಸೇರಿ ಕೈಯಿಂದ ಹಲ್ಲೆಯನ್ನು ನಡೆಸಿ, ` ಪೊಲೀಸರಿಗೆ ಭಾರೀ ಅಹಂಕಾರ ಇದೆ. ನಿಮ್ಮಲ್ಲಿ ಒಬ್ಬರನ್ನು ಕೊಲೆ ಮಾಡಿದರೆ ಮಾತ್ರ ಬುದ್ದಿ ಬರುತ್ತದೆ ‘ ಎಂದು ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಪೇದೆ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಹಿಂದೆಯೂ ನಡೆದಿತ್ತು ಹಲ್ಲೆ
ಕೆಲ ತಿಂಗಳ ಹಿಂದೆ ದರ್ಗಾ ಆವರಣದಲ್ಲಿ ಹೋಂ ಗಾಡ್ ್ ಸಿಬ್ಬಂದಿ ಮತ್ತು ಉಳ್ಳಾಲ ಠಾಣಾ ಸಿಬ್ಬಂದಿ ದಿನೇಶ್ ಎಂಬವರಿಗೆ ಇಬ್ಬರ ತಂಡ ಹಲ್ಲೆ ನಡೆಸಿತ್ತು. ಈ ಕುರಿತ ಪ್ರಕರಣವೂ ಉಳ್ಳಾಲ ಠಾಣೆಯಲ್ಲಿದೆ. ಆರೋಪಿಗಳ ಬಂಧನವಾಗಿತ್ತು. ಇಂತಹ ವಾತಾವರಣದಿಂದ ಹಿರಿಯ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಸಿಬ್ಬಂದಿಯೂ ಉಳ್ಳಾಲ ಠಾಣೆಗೆ ವರ್ಗಾವಣೆಗೊಂಡರೂ ಬರಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ.


