ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯಿದ್ ಮದನಿ ದರ್ಗಾ ಆಡಳಿತ ಸಮಿತಿಗಾಗಿ ಐದು ವರ್ಷಗಳಿಗೊಮ್ಮೆ ನಡೆಯುವ ಮಹಾಸಭೆಯ ಪ್ರಥಮ ಹಂತ ಶುಕ್ರವಾರ ಮಧ್ಯಾಹ್ನ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಜರಗಿತು.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಮದನಿ ಇವರ ನೇತೃತ್ವದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಯು.ಎಸ್.ಹಂಝ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಳ್ಳಾಲದ ಖಾಝಿ ನೇಮಕ ವಿರುದ್ಧ ಉಳ್ಳಾಲದಲ್ಲಿ ಬಣಗಳು ಆರಂಭವಾಗಿತ್ತು. ಇದರಿಂದ ದರ್ಗಾ ಆಡಳಿತ ಮಂಡಳಿ ಮತ್ತು ಮೇಲಂಗಡಿ ಹೊಸಪಲ್ಲಿಯ ನಡುವೆ ವಿವಾದ ಏರ್ಪಟ್ಟಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಹಿಂದೆ ಆಡಳಿತ ಸಮಿತಿ ರಚಿಸುವ ಸಂದರ್ಭ ಗಲಾಟೆ ನಡೆದು ಮೇಲಂಗಡಿಯ ಹೊಸಪಲ್ಲಿ ಆವರಣದಲ್ಲಿ ಹಿಂಸಾಚಾರ ನಡೆದಿತ್ತು. ಘಟನೆ ಮತ್ತೆ ಮರುಕಳಿಸದಂತೆ ದರ್ಗಾ ಸಮಿತಿ ಪೊಲೀಸ್ ಬಂದೋಬಸ್ತಿಗಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಪಿ ನಾಲ್ಕು ತುಕಡಿಗಳು, ಮಂಗಳೂರಿನಿಂದ ಹೆಚ್ಚುವರಿ ಠಾಣಾ ಪೊಲೀಸರು, ತಹಶೀಲ್ದಾರ್ , ಡಿಸಿಪಿ, ಎಸಿಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳ ಬಿಗಿಬಂದೋಬಸ್ತಿನಲ್ಲಿ ಮಹಾಸಭೆ ನಡೆಯಿತು. ಮಹಾಸಭೆ ನಡೆಯುವ ದರ್ಗಾ ವಠಾರದಲ್ಲಿರುವ ಮದನಿ ಹಾಲ್‍ನ ಒಳಗಡೆ ತೆರಳುವವರನ್ನು ಲೋಹ ಪರಿಶೋಧಕಗಳ ಮೂಲಕ ಪರೀಕ್ಷಿಸಿ ಒಳಬಿಡಲಾಯಿತು.ಮಧ್ಯಾಹ್ನ ಶುಕ್ರವಾರದ ಪ್ರಾರ್ಥನೆ ಮುಗಿದ ಬಳಿಕ ಮಹಾಸಭೆ ಆರಂಭವಾಯಿತು. ಈ ವೇಳೆ ಐದು ವರ್ಷಗಳ ಲೆಕ್ಕಾಚಾರವನ್ನು ಮಂಡಿಸಲಾಯಿತು.
ಮೇಲಂಗಡಿ ಕರ್ಯಕ್ಕೆ ಆಹ್ವಾನವಿಲ್ಲ :
ಮಹಾಸಭೆಯ ಕುರಿತು ಹೊಸಪಲ್ಲಿಗೆ ಸೇರಿದ ಕರ್ಯಕ್ಕೆ ಆಹ್ವಾನ ನೀಡಿಲ್ಲ.ಇದನ್ನು ಮಹಾಸಭೆಯಲ್ಲಿ ವಿರೋಧಿಸಿದ ಹೊಸಪಲ್ಲಿ ಆಡಳಿತ ಸಮಿತಿಯವರು ಸಭೆಯನ್ನು ಅಸಿಂಧು ಎಂದು ಘೋಷಿಸಿದರು. ಅಲ್ಲದೆ ಸಭೆಯಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳದಂತೆ, ಮುಂದೂಡುವಂತೆ ಒತ್ತಡ ಹೇರಲಾಯಿತು. ಗೊಂದಲ್ಲಿ ಮುಂದುವರಿದ ಸಭೆಯ ಮಧ್ಯಪ್ರವೇಶಿಸಿದ ಪೊಲೀಸರು ಎರಡು ಬಣದವರನ್ನು ಸಮಧಾನಗೊಳಿಸುವಲ್ಲಿ ಸಫಲರಾದರು. ಅವರ ಮಧ್ಯಸ್ಥಿಕೆಯಲ್ಲಿ ಸಭೆಯನ್ನು ಒಂದು ವಾರದ ಕಾಲ ಮುಂದೂಡಲಾಯಿತು.
ಆಡಳಿತ ಬೈಲಾ ಪ್ರಕಾರ ಐದು ಕರಿಯದವರನ್ನು ವರ್ಷಕ್ಕೊಮ್ಮೆ ನಡೆಯುವ ಮಹಾಸಭೆಗೆ ಕರೆಯಬೇಕಿತ್ತು. ಆದರೆ ನಾಲ್ಕು ಕರಿಯದವರನ್ನು ಮಾತ್ರ ಕರೆದಿದ್ದಾರೆ. ಮೇಲಂಗಡಿ ಕರಿಯದವರಿಗೆ ಆಹ್ವಾನವನ್ನೇ ನೀಡದೆ ಬೈಲಾ ವಿರೋಧವಾಗಿ ನಡೆದುಕೊಂಡಿದ್ದಾರೆ. ಇದನ್ನು ಕರಿಯಕ್ಕೆ ಸಂಬಂಧಿಸಿದ ಮೇಲಂಗಡಿಯ ಜಮಾಅತಿನ ಸದಸ್ಯರೆಲ್ಲರೂ ಸೇರಿಕೊಂಡು ಮಹಾಸಭೆಯಲ್ಲಿ ಪ್ರಶ್ನಿಸಿದ್ದೇವೆ. ಅದಕ್ಕೆ ಉತ್ತರ ನೀಡಲು ಸಾಧ್ಯವಾಗದ ದರ್ಗಾ ಆಡಳಿತ ಮಂಡಳಿ ಸಭೆಯನ್ನು ಅರ್ಧಕ್ಕೇ ನಿಲ್ಲಿಸಿದೆ. ಇದನ್ನು ಮತ್ತೆ ಅಧ್ಯಕ್ಷರ ಕೊಠಡಿಗೆ ತೆರಳಿ ಪ್ರಶ್ನಿಸುವಾಗ ಪೊಲೀಸರು ಮಧ್ಯಸ್ಥಿಕೆ ವಹಿಸಿ, ಬಗೆಹರಿಸುವ ತೀರ್ಮಾನಕ್ಕೆ ಮುಂದಾದರು. ಅದಕ್ಕೆ ಅನುಗುಣವಾಗಿ ಒಂದು ವಾರದವರೆಗೆ ಸಭೆಯನ್ನು ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಯಿತು. ಅದರಲ್ಲಿ ಎಲ್ಲರನ್ನು ಆಹ್ವಾನಿಸಿ, ಉಳ್ಳಾಲದ ಖಾಝಿಯವರ ನೇತೃತ್ವದಲ್ಲಿ ಸಭೆಯನ್ನು ನಡೆಸುವ ತೀರ್ಮಾನಕ್ಕೆ ಎಲ್ಲರ ಸಮ್ಮತಿ ಸಿಕ್ಕಿದೆ .
ಮುಸ್ತಾಫ ಅಬ್ದುಲ್ಲಾ
ಮೇಲಂಗಡಿ ಜುಮಾ ಮಸೀದಿ ಅಧ್ಯಕ್ಷರು
ಸ್ವಾರ್ಥಕ್ಕಾಗಿ ಮೇಲಂಗಡಿ ಮಸೀದಿಯನ್ನು ಮಹಾಸಭೆಯಿಂದ ಬಹಿಷ್ಕರಿಸಿದ್ದಾರೆ. ಎಲ್ಲಾ ಐದು ಅಳೇಕಲ, ಮೇಲಂಗಡಿ, ಮುಕ್ಕಚ್ಚೇರಿ, ಕಲ್ಲಾಪು, ಕೋಟೆಪುರ ಕರಿಯದವರು ಎಲ್ಲರೂ ಸೇರಿಕೊಂಡು ಹೊಸಪಲ್ಲಿ ಬಹಿಷ್ಕಾರದ ವಿರುದ್ಧ ಮಾತನಾಡಿ, ಮಹಾಸಭೆಯನ್ನು ಅಸಿಂಧು ಎಂದು ಪರಿಗಣಿಸಿದ್ದಾರೆ. ಎಲ್ಲಾ ಕರಿಯದವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಒಂದು ವಾರದವರೆಗೆ ಸಭೆಯನ್ನು ಮುಂದೂಡಲಾಗಿದೆ.
ಯು.ಕೆ.ಮಹಮ್ಮದ್ ಮುಸ್ತಾಫ
ದರ್ಗಾ ಸಮಿತಿ ಮಾಜಿ ಸದಸ್ಯರು



