ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಕಾಪಿಕಾಡಿನ ಪೂಜಾ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿದ್ದ ಮದುವೆ ನಿಶ್ಚಿತಾರ್ಥ ಸಮಾರಂಭವನ್ನು ನಿಲ್ಲಿಸಲು ಮುಂದಾದ ಉಳ್ಳಾಲ ಪೊಲೀಸರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಡೆದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಂದುವರಿಸಿದ ಘಟನೆ ನಡೆಯಿತು.

ಮಾಡೂರು ನಿವಾಸಿ ಯುವಕನ ನಿಶ್ಚಿತಾರ್ಥ ಸಮಾರಂಭ ಕಾಪಿಕಾಡಿನ ಪೂಜಾ ಕಾಂಪ್ಲೆಕ್ಸ್‍ನಲ್ಲಿ ಆಯೋಜಿಸಲಾಗಿತ್ತು. ರಸ್ತೆಬದಿಯಲ್ಲಿ ಜನ ಸೇರಿರುವುದನ್ನು ಕಂಡು ಉಳ್ಳಾಲ ಪೊಲೀಸರು ನಿಶ್ಚಿತಾರ್ಥ ಸಭಾಂಗಣದ ಹೊರಗೆ ಜಮಾಯಿಸಿ, ಕಾರ್ಯಕ್ರಮವನ್ನು ಮುಂದೂಡಲು ಒತ್ತಡ ಹೇರಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ಉಳ್ಳಾಲ್ ಅವರು ಪೊಲೀಸರ್ನು ತರಾಟೆಗೆ ತೆಗೆದುಕೊಂಡು, ಬಂದ್ ಗೆ ಪೊಲೀಸರೇ ಪ್ರಚೋದಿಸಿದಂತಾಗಿದೆ. ಗಲಭೆ ಪೊಲೀಸರಿಂದಲೇ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿ ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ ಅವರಿಗೆ ಕರೆ ಮಾಡಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಡ್ಡಿಪಡಿಸದಂತೆ ಒತ್ತಡ ಹೇರಿದ್ದರೆನ್ನಲಾಗಿದೆ. ಆ ಬಳಿಕ ನಿಶ್ಚಿತಾರ್ಥ ಸಮಾರಂಭ ಸುಸೂತ್ರವಾಗಿ ನಡೆಯಿತೆನ್ನಲಾಗಿದೆ.


