ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಾವೂರು: ಅಕ್ರಮ, ಅವ್ಯಾಹತ ಮರಳುಗಾರಿಕೆ ವಿರುದ್ಧ ಪಾವೂರು ಗ್ರಾಮಸ್ಥರು ನಡೆಸುತ್ತಿದ್ದ ಹೋರಾಟ ಪರಿಗಣಿಸಿ ಗ್ರಾಮ ಪಂಚಾಯಿತಿ ಮರಳುಗಾರಿಕೆಗೆ ನಿಷೇಧ ಹೇರಿ ಎಚ್ಚರಿಕೆ ಫಲಕ ಅಳವಡಿಸಿದ್ದು ಇದೇ ಸಂದರ್ಭ ಮರಳು ಮಾಲೀಕರು ನದಿಯಲ್ಲಿ ಗುರುತಿಗಾಗಿ ಅಳವಡಿಸಿದ್ದ ಕಂಬಗಳನ್ನು ಗ್ರಾಮಸ್ಥರು ಕಿತ್ತೆಸಿದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪಾವೂರು ಗ್ರಾಮ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆಯೇ ಇನೋಳಿ ನಾಟ್ರಕೋಡಿ, ಪಾವೂರು ಗಾಡಿಗದ್ದೆ ಮತ್ತು ಉಳಿಯದಲ್ಲಿ ಅವ್ಯಾವಹತವಾಗಿ ಮರಳುಗಾರಿಕೆ ನಡೆಯುತ್ತಿತ್ತು. ಇದರ ಪರಿಣಾಮವಾಗಿ ಸ್ಥಳೀಯ ಪ್ರದೇಶದಲ್ಲಿ ಉಪ್ಪು ನೀರು ಬಂದಿದ್ದು ಪಂಚಾಯಿತಿಯ ತೆರೆದ ಬಾವಿ ಮತ್ತು ಕೃಷಿ ಪ್ರದೇಶಕ್ಕೂ ಉಪ್ಪು ನೀರು ಬಂತು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನೊಂದೆಡೆ ಉಳಿಯ ಎನ್ನುವ ದ್ವೀಪವೇ ಅಪಾಯಕ್ಕೆ ಸಿಲುಕಿತ್ತು. ಇದರ ವಿರುದ್ಧ ಗ್ರಾಮಸ್ಥರು ಹೋರಾಟ ನಡೆಸಿದ್ದು ಪಾವೂರು ಗ್ರಾಮ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದ್ದ ಜಿಲ್ಲಾಡಳಿತ ಪಂಚಾಯಿತಿಗೆ ಸಂಪೂರ್ಣ ಅಧಿಕಾರ ನೀಡಿತ್ತು. ಅಕ್ರಮ ಮರಳುಗಾರಿಕೆಯಿಂದ ಆಗುತ್ತಿದ್ದ ಅನಾಹುತದ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ನಿರಂತರ ವರದಿ ಪ್ರಕಟಿಸಲಾಗಿತ್ತು.
ಆದರೂ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಇದರ ವಿರುದ್ಧ ನಿಂತ ಗ್ರಾಮಸ್ಥರಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ನಿರ್ಣಯದಂತೆ ಮರಳುಗಾರಿಕೆಗೆ ಸಂಪೂರ್ಣ ನಿಷೇಧ ಹೇರಿ ಎಚ್ಚರಿಕೆ ಫಲಕ ಅಳವಡಿಸಲು ಪಂಚಾಯಿತಿ ನಿರ್ಣಯಿಸಿತ್ತು. ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಳು, ಪೊಲೀಸರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಸಮ್ಮುಖದಲ್ಲಿ ನಾಟ್ರಕೋಡಿ, ಉಳಿಯ ಹಾಗೂ ಗಾಡಿಗದ್ದೆಯಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಯಿತು.
ಗುರುತು ಕಿತ್ತೆಸೆದ ಗ್ರಾಮಸ್ಥರು
ನಾಟ್ರಕೋಡಿಯಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ ಬಳಿಕ ದೋಣಿಯಲ್ಲಿ ಉಳಿಯಕ್ಕೆ ಅಧಿಕಾರಿಗಳು, ಪೊಲೀಸರ ಜೊತೆ ಹೋಗುವ ಸಂದರ್ಭ ಮರಳುಗಾರಿಕೆ ನಡೆಯುತ್ತಲೇ ಇತ್ತು. ಈ ಸಂದರ್ಭ ಅಧಿಕಾರಿಗಳು ಮೌನ ವಹಿಸಿದ್ದು ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರನ್ನು ಕೆರಳಿಸಿ ಅಧಿಕಾರಳ ವಿರುದ್ಧ ಆಕ್ರೋಶವೂ ವ್ಯಕ್ತವಾಯಿತು. ಇದೇ ವೇಳೆ ನದಿಯಲ್ಲಿ ಕೆಂಪು ಧ್ವಜವುಳ್ಳ ಕಂಬಗಳು ಕಂಡು ಬಂದಿದ್ದು ಈ ಬಗ್ಗೆ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇಲಾಖೆಯಿಂದ ಗುರುತು ಹಾಕಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ತಕ್ಷಣವೇ ಗ್ರಾಮಸ್ಥರು ಪೊಲೀಸರು ಹಾಗೂ ಅಧಿಕಾರಿಗಳನ್ನು ದೋಣಿಯಲ್ಲಿ ಕರೆದೊಯ್ದು ಗುರುತಿಗೆ ಅಳವಡಿಸಿದ್ದ ಕಂಬಗಳನ್ನು ಕಿತ್ತು ನದಿಗೆಸೆದರು.
ಎಲ್ಲರೂ ಉಪ್ಪು ನೀರು ಕುಡಿಯಬೇಕಾದೀತು
ಈ ಸಂದರ್ಭ ಮಾತನಾಡಿದ ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್, ಕಳೆದ ಐದು ವರ್ಷಗಳಿಂದ ನಿರಂತರ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದರಿಂದ ಉಪ್ಪು ನೀರು ಬಂದಿದೆ. ಇದರ ಪರಿಣಾಮವಾಗಿ ಗ್ರಾಮದ ಶೇ.75ರಷ್ಟು ಜನರು ಉಪ್ಪು ನೀರು ಕುಡಿಯುವಂತಾಗಿದ್ದು ಮುಂದಿನ ದಿನ ಎಲ್ಲರಿಗೂ ಇದೇ ಪರಿಸ್ಥಿತಿ ಬರಬರುವ ಭೀತಿಯಿದೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಮರಳು ಮಾಲೀಕರು ಹಲ್ಲೆ ನಡೆಸಿ ಗೂಂಡಾಗಿರಿ ಮೆರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಂಚಾಯಿತಿ ನಿರ್ಣಯದಂತೆ ಎಚ್ಚರಿಕೆ ಫಲಕ ಅಳವಡಿಸಲಾಗುತ್ತಿದೆ ಎಂದರು.
ಕೃಷಿಕ ಕ್ಯಾನೂಟ್ ಡಿಸೋಜ ಮಾತನಾಡಿ, ಉಪ್ಪು ನೀರಿನಿಂದ ಕೃಷಿಗೂ ಹಾನಿಯಾಗುತ್ತಿದೆ, ಈ ಬಗ್ಗೆ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಮರಳುಗಾರಿಕೆಗೆ ನಿಷೇಧವಿದ್ದರೂ ಬಲವಂತದಿಂದ ಮರಳು ತೆಗೆಯುತ್ತಿದ್ದು ಸ್ಥಳೀಯರಿಗೆ ಹಲ್ಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಪಂಚಾಯಿತಿ ಸದಸ್ಯ ಮಹಮ್ಮದ್ ಇನೋಳಿ ಮತನಾಡಿ, ಅಕ್ರಮ ಮರಳುಗಾರಿಕೆಯಿಂದ ಉಪ್ಪು ನೀರು ಕುಡಿಯುವ ಸ್ಥಿತಿಗೆ ಜನ ತಲುಪಿದ್ದು ಈ ಬಗ್ಗೆ ಪಂಚಾಯಿತಿ ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ನಿರ್ಣಯ ಕೈಗೊಂಡು ಮರಳುಗಾರಿಕೆಗೆ ಸಂಪೂರ್ಣ ನಿಷೇಧ ಹೇರುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಪಾವೂರು ವ್ಯಾಪ್ತಿಯಲ್ಲಿ ಅಕ್ರಮ ಮರಳು ತೆಗೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗುವುದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿ ಬಿ.ಕೆ. ಮೂರ್ತಿ ಭರವಸೆ ನೀಡಿದರು. ಭರವಸೆ ಈಡೇರದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಇಲಾಖೆ ನೇರ ಹೊಣೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಮಹಾದೇವಪ್ಪ, ಪಾವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ, ಸದಸ್ಯ ವಿವೇಕ್ ರೈ, ಗ್ರಾಮ ಕರಣಿಕ ದೇವರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ, ಗ್ರಾಮ ಸಹಾಯಕ ಉಮೇಶ್, ಸ್ಥಳೀಯರಾದ ಬಶೀರ್ ಎಸೈಟ್, ಬಾಬು ರಾವ್, ಸುರೇಶ್ ಶೆಟ್ಟಿ ಬೀಡು, ಜಾರ್ಜ್ ಡಿಸೋಜ, ಸಮದ್ ಉಪಸ್ಥಿತರಿದ್ದರು.





