ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಯೇನೆಪೊಯ: ಬಡವರಿಗೆ ಚಿಕಿತ್ಸೆ, ಬಡಮಕ್ಕಳಿಗೆ ಶೈಕ್ಷಣಿಕ ನೆರವು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳ ಮದುವೆಗೆ ನೆರವು ನೀಡುತ್ತಾ ಬರಲಾಗಿದ್ದು ಸಮಾಜ ಸೇವೆಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ರಕ್ತದಾನಿಗಳ ಸಂಘ ಅಸ್ತಿತ್ವಕ್ಕೆ ತರಲಾಗಿದೆ ಎಂದು ಬ್ಯಾರೀಸ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಮುಸ್ತಫಾ ಬಸ್ತಿಕೋಡಿ ಹೇಳಿದರು.
ಇನೋಳಿ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನದ ಉದ್ದೇಶದಿಂದ ಬುಧವಾರ ಯೇನೆಪೊಯ ಆಸ್ಪತ್ರೆ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ಬಿಐಟಿ ಲೈಫ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ನೇಹಿತರು, ಸಂಬಂಧಿಕರು ಅಥವಾ ಇತರರಿಗೆ ರಕ್ತ ಅಗತ್ಯವಿರುವ ಸಂದರ್ಭ ಯಾರನ್ನೋ ಅವಲಂಭಿಸಲಾಗುತ್ತಿದೆ. ಕೆಲವೊಮ್ಮೆ ರಕ್ತ ಸಿಗದೆ ಪ್ರಾಣಹಾನಿಯೂ ಸಂಭವಿಸುತ್ತಿದ್ದು ಇದನ್ನು ಮನಗಂಡು ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಮಾಹಿತಿ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ಶೇಖ್ ಮೊಯಿದ್ದೀನ್ ಮಾತನಾಡಿ, ಕಾಲೇಜಿನಲ್ಲಿ ಸಾವಿರದಷ್ಟು ವಿದ್ಯಾರ್ಥಿಗಳಿದ್ದು ರಕ್ತದಾನ ಮಾಡುವ ಉದ್ದೇಶದಿಂದಲೇ ಬಿಐಟಿ ಲೈಫ್ ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಸಂಘದಲ್ಲಿರುವ ಸದಸ್ಯರ ರಕ್ತದ ಗುಂಪು, ಸಂಪರ್ಕ ಸಂಖ್ಯೆಯನ್ನು ವೆಬ್‍ಸೈಟ್‍ನಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಅದುವರೆಗೆ ರಕ್ತದ ಅವಶ್ಯತಕೆ ಯಾರಿಗಾದರೂ ಕಂಡು ಬಂದಲ್ಲಿ ಶೇಖ್ ಮೊಯಿದ್ದೀನ್ 9535623472 ಅಥವಾ ಫಾರೂಕ್ 9964912971 ಈ ಸಂಖ್ಯೆಯನ್ನು ಸಂಪಕಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಆರ್.ಪಿ.ರೆಡ್ಡಿ ಶಿಬಿರ ಉದ್ಘಾಟಿಸಿದರು. ವಾರ್ಡನ್ ಎಂ.ಟಿ.ನಿಸಾರ್, ದೈಹಿಕ ಶಿಕ್ಷಣ ನಿರ್ದೇಶಕ ಸಫ್ವಾನ್, ಸಂಘದ ಪ್ರಮುಖರಾದ ಸಿವಿಲ್ ವಿಭಾದ ಅಜ್‍ಮಾಲ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಫಾರೂಕ್, ಶಿಬಿರ ಸಂಯೋಜಕ ಅಬ್ದುಲ್ ರಝಾಕ್, ಡಾ.ಶಶಿಧರ್ ಎಂ.ಆರ್. ಮೊದಲಾದವರು ಉಪಸ್ಥಿತರಿದ್ದರು.


