ಮುಂಬೈ, ನ.12 : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದ ಪೆಂಡೆಂಟ್ ಕುರಿತಾಗಿ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್ ಆಕ್ಷೇಪ ವ್ಯಕ್ತಪಡಿಸಿದ್ದು, ನಟಿಗೆ ಕೋರ್ಟ್ ನೋಟಿಸ್ ಕಳುಹಿಸಿದ್ದಾರೆ.

ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಆಭರಣದಲ್ಲಿ ಪವಿತ್ರ ಕುರಾನ್ನ ಆಯತುಲ್ ಕುರ್ಸಿ ಪದ್ಯ ಕೆತ್ತಲಾಗಿದೆ ಎನ್ನಲಾಗಿದೆ. ಇದನ್ನು ಫ್ಯಾಷನ್ ಪರಿಕರವಾಗಿ ಧರಿಸಿದ್ದಕ್ಕೆ ಕರೀನಾ ಕಪೂರ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು ಹಫೀಜ್ ಒತ್ತಾಯಿಸಿದ್ದಾರೆ.
ಕುರಾನ್ನ ವಚನಗಳು ಮುಸ್ಲಿಮರಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿವೆ. ಅವುಗಳನ್ನು ಗೌರವದಿಂದ ಕಾಣಬೇಕು. ಕೆಲವರು ಧಾರ್ಮಿಕ ಶುದ್ಧೀಕರಣವಾದ ವುಡು ಮಾಡದೆ ಕುರಾನ್ನ ವಚನಗಳನ್ನು ಮುಟ್ಟುವುದನ್ನೂ ತಪ್ಪಿಸುತ್ತಾರೆ. ತಮ್ಮ ಈ ಕ್ರಮ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಕಾಂಗ್ರೆಸ್ ನಾಯಕನಾಗಿ ಅಲ್ಲ, ಮುಸ್ಲಿಂ ಸಮುದಾಯದೊಂದಿಗಿನ ಸಂಬಂಧದ ಕಾರಣಕ್ಕೆ ಕಾನೂನು ನೋಟಿಸ್ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.ಕರೀನಾ ಅವರ ಸ್ಟೈಲಿಸ್ಟ್ ರಿಯಾ ಕಪೂರ್ ಇನ್ಸ್ಟಾಗ್ರಾಂನಲ್ಲಿ ನಟಿಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅವರ ಪ್ರಕಾರ, ಕರೀನಾ ಧರಿಸಿದ್ದ ಆಭರಣಗಳು ಭೋಪಾಲ್ ರಾಜಮನೆತನದ ಆಭರಣ ವಿನ್ಯಾಸವಾಗಿದೆ. ಸುಮಾರು 200 ವರ್ಷ ಹಳೆಯದಾದ ಭೋಪಾಲ್ ನವಾಬರ ಕಲ್ಗಿ ಹಾಗೂ 30 ಕ್ಯಾರೆಟ್ ಪಚ್ಚೆಯೊಂದಿಗೆ ಆಯತುಲ್ ಕುರ್ಸಿ ವಚನ ಕೆತ್ತಿರುವ ಆಭರಣವನ್ನೂ ಅವರು ಪ್ರದರ್ಶಿಸಿದ್ದಾರೆ.ಈ ಆಭರಣಗಳು ಕರೀನಾ ಅವರ ಸ್ವಂತ ಸಂಗ್ರಹದಲ್ಲಿದ್ದು, ಸೈಫ್ ಅಲಿ ಖಾನ್ ಅವರ ಕುಟುಂಬದ ಮೂಲಕ ಬಂದಿವೆ. ಸೈಫ್ ಅವರ ಅಜ್ಜಿ ಸಾಜಿದಾ ಸುಲ್ತಾನ್ ಅವರು ಭೋಪಾಲ್ನ ಕೊನೆಯ ಆಡಳಿತ ನವಾಬನ ಪುತ್ರಿ ಎಂದು ರಿಯಾ ಪೋಸ್ಟ್ ಮಾಡಿದ್ದಾರೆ.

