ತೊಕ್ಕೊಟ್ಟು: ಬಬ್ಬುಕಟ್ಟೆಯ ಮಾನ್ವಿ ಎಂ. ಪೂಜಾರಿ ಅವರು ಮೈಸೂರಿನಲ್ಲಿ ನಡೆದ ದಸರಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಕ್ಟೋಬರ್ 13ರಂದು ನಡೆದ ಈ ಚಾಂಪಿಯನ್ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಫಿಸಿಯೋಥೆರಪಿ ಪದವಿಯ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಮಾನ್ವಿ, ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದಾರೆ. ತೊಕ್ಕೊಟ್ಟಿನಲ್ಲಿ ವಿನೋದ್ ಕುಮಾರ್ ರಾವ್ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿರುವ ಅವರು, ಮಂಗಳೂರಿನಲ್ಲಿ ಶಿವಪ್ರಸಾದ್ ಆಚಾರ್ಯ ಅವರಿಂದ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾರೆ.


ಕರಾಟೆಯಲ್ಲಿ 3ನೇ ಡಾನ್ ಬ್ಲ್ಯಾಕ್ ಬೆಲ್ಟ್ ಹೊಂದಿರುವ ಮಾನ್ವಿ, ರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಪಟುವಾಗಿದ್ದಾರೆ. ಈವರೆಗೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದಿರುವ ಅವರು, ತಮ್ಮ ಪ್ರತಿಭೆ, ನಿರಂತರ ಪರಿಶ್ರಮ ಹಾಗೂ ಸಾಧನೆಯ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.


ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ಕರಾಟೆ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಮಾರ್ಗದರ್ಶನದಲ್ಲಿ 15 ವಿದ್ಯಾರ್ಥಿಗಳು ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಬಬ್ಬುಕಟ್ಟೆಯ ಮುಖೇಶ್ ಹಾಗೂ ರುಕ್ಮಿಣಿ ದಂಪತಿಯ ಪುತ್ರಿಯಾಗಿರುವ ಮಾನ್ವಿ, ದಸರಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಕ್ರೀಡಾ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಸಾಧನೆಗೆ ಕ್ರೀಡಾಭಿಮಾನಿಗಳು, ಸ್ಥಳೀಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.


