ಬೀಜಿಂಗ್: ಸುಮಾರು 35 ವರ್ಷಗಳ ಬಳಿಕ `ದಂಪತಿಗೆ ಒಂದೆ ಮಗು` ಅನ್ನೋ ವಿವಾದಾತ್ಮಕ ನೀತಿಯನ್ನು ಚೀನಾ ಸರಕಾರ ರದ್ದುಗೊಳಿಸಿದೆ.
ದಂಪತಿಗಳಿಬ್ಬರು ಎರಡು ಮಗುವನ್ನು ಹೊಂದಲು ಚೀನಾದ ಕಮ್ಯೂನಿಷ್ಟ್ ಸರಕಾರ ಅವಕಾಶ ಮಾಡಿಕೊಟ್ಟಿದೆ.
ಜನಸಂಖ್ಯೆ ಸಮತೋಲನ ಹಾಗೂ ವೃದ್ಧರ ಸಂಖ್ಯೆ ಏರಿಕೆ ಸಮಸ್ಯೆಯನ್ನು ನಿಭಾಯಿಸುವ ಸಲುವಾಗಿ ಈ ನೀತಿಯನ್ನು ಹಿಂಪಡೆಯಲಾಗಿದೆ.
1979ರಲ್ಲಿ ದಂಪತಿಗೆ ಒಂದೆ ಮಗು ಎಂಬ ನೀತಿಯನ್ನು ಚೀನಾ ಸರಕಾರ ಜಾರಿಗೊಳಿಸಿತ್ತು. ಕಳೆದ ಮೂರು ದಶಕಗಳಿಂದ ಸರಕಾರದ ಈ ನೀತಿಯನ್ನು ಅಲ್ಲಿನ ಜನತೆ ಕಡ್ಡಾಯವಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು.
ಎರಡು ಮಗುವನ್ನು ಪಡೆಯುವ ದಂಪತಿಗೆ ಭಾರಿ ಮೊತ್ತದ ದಂಡ ಹಾಗೂ ಉದ್ಯೋಗದಿಂದ ತೆಗೆಯುವ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಸರಕಾರದ ಈ ನೀತಿಯಿಂದ ಎಲ್ಲರೂ ಕೂಡ ಒಂದೇ ಮಗುವನ್ನು ಪಡೆಯುತ್ತಿದ್ದು, ಸುಮಾರು 40ಕೋಟಿ ಮಗುವಿನ ಜನನಕ್ಕೆ ಕಡಿವಾಣ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಉದ್ಯೋಗಕ್ಕೆ ಯುವಕರ ಸಂಖ್ಯೆ ಕಡಿಮೆಯಾದುದರ ಪರಿಣಾಮ ಅಭಿವೃದ್ಧಿ ದರ ಇಳಿಕೆಗೆ ಕಾರಣವಾಗಿತ್ತು.
ಸರಕಾರದ ಈ ನೀತಿಯ ಬಗ್ಗೆ ಅನೇಕ ಒತ್ತಡಗಳು ಬರುತ್ತಿದ್ದರೂ ಸಹ ಸರಕಾರ ಮಾತ್ರ ಯಾವುದಕ್ಕೂ ಮಣಿದಿರಲಿಲ್ಲ. ಆದರೆ ಇದೀಗ ಒಂದೇ ಮಗುವಿನ ನೀತಿಯನ್ನು ರದ್ದಗೊಳಿಸಿ ಎರಡು ಮಗುವನ್ನು ಪಡೆಯುವ ಅವಕಾಶವನ್ನು ಚೀನಾ ಸರಕಾರ ನೀಡಿದೆ.


