ನಾಲ್ಕು ವರ್ಷದ ನವ್ಯಳ ಶಸ್ತ್ರಚಿಕಿತ್ಸೆಗೆ ಟೀಮ್ ಹನುಮಾನ್ ನೆರವು
ಉಳ್ಳಾಲ, ಅ. 26: ನವರಾತ್ರಿ ಸಂದರ್ಭದಲ್ಲಿ ಯಕ್ಷವೇಷ ಧರಿಸಿ ಸಂಗ್ರಹಿಸಿದ ₹2,01,674 ಮೊತ್ತವನ್ನು ನಾಲ್ಕು ವರ್ಷದ ಬಾಲಕಿ ನವ್ಯಳ ಶಸ್ತ್ರಚಿಕಿತ್ಸೆಗೆ ಹಸ್ತಾಂತರಿಸುವ ಮೂಲಕ ಉಳ್ಳಾಲ ಧರ್ಮನಗರದ ಟೀಮ್ ಹನುಮಾನ್ ಸಂಘಟನೆ ಮಾನವೀಯ ಸೇವೆ ಮೆರೆದಿದೆ.


‘ಭವತೀ ಭಿಕ್ಷಾಂ ದೇಹಿ’ ಪರಿಕಲ್ಪನೆಯಡಿ ಕಳೆದ ನವರಾತ್ರಿಯಲ್ಲಿ ಯಕ್ಷವೇಷ ಧರಿಸಿ ಸಂಗ್ರಹಿಸಿದ ಸಹಾಯಧನವನ್ನು ಧರ್ಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಬಾಲಕಿಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಬಂಟ್ವಾಳದ ಕಲ್ಲಗುಡ್ಡೆ, ಪಲ್ಲಮಜಲುವಿನ ಆನಂದ ಪೂಜಾರಿ ಮತ್ತು ಯಶೋಧ ದಂಪತಿಯ ಪುತ್ರಿ ನವ್ಯ ವಾಕ್ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಶಸ್ತ್ರಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ತಂಡ ಈ ಸೇವಾ ಕಾರ್ಯ ಕೈಗೊಂಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್, ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶ್ಲಾಘನೀಯ. ಟೀಮ್ ಹನುಮಾನ್ ತಂಡ ಕಳೆದ ಐದು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಸಮಾಜದ ಅಶಕ್ತ ವರ್ಗದವರಿಗೆ ನೆರವಾಗಿ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ಇಂತಹ ಸೇವಾ ಕಾರ್ಯಗಳಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಉಳ್ಳಾಲ ಶಾರದೋತ್ಸವ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಬಂಗೇರ ಅರಸುಹಿತ್ಲು ಮಾತನಾಡಿ, ಟೀಮ್ ಹನುಮಾನ್ ತಂಡದ ಮೇಲೆ ವಿಶ್ವಾಸವಿಟ್ಟು ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ದೇಣಿಗೆ ಅರ್ಹ ಫಲಾನುಭವಿಗಳಿಗೆ ತಲುಪುತ್ತಿರುವುದು ತಂಡದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಸಂಘಟನೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಉಳ್ಳಾಲ ಬೈಲಿನ ವೈದ್ಯನಾಥ ಕ್ಷೇತ್ರದ ಪ್ರಧಾನ ಅರ್ಚಕ ಮುಂಡ ಯಾನೆ ದಾಮೋದರ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮನಗರದ ಟೀಮ್ ವಜ್ರ ತಂಡದ ಮಕ್ಕಳು ನವರಾತ್ರಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ₹10,000 ಮೊತ್ತವನ್ನು ನವ್ಯಳ ಕುಟುಂಬಕ್ಕೆ ಹಸ್ತಾಂತರಿಸಿದರು. ಇದೇ ವೇಳೆ ಧರ್ಮನಗರದ ಅನಾರೋಗ್ಯ ಪೀಡಿತ ಅರವಿಂದ್ ಅವರಿಗೂ ಟೀಮ್ ಹನುಮಾನ್ ವತಿಯಿಂದ ಸಹಾಯಧನ ನೀಡಲಾಯಿತು.
ಒಂಭತ್ತುಕೆರೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷ ಶರತ್ಚಂದ್ರ ಗಟ್ಟಿ ಮಾತನಾಡಿ, ಇಂತಹ ಸೇವಾ ಕಾರ್ಯಗಳಿಗೆ ಸಮಾಜ ಬೆಂಬಲವಾಗಿ ನಿಲ್ಲಬೇಕು. ಸಮಾಜದ ಪ್ರೋತ್ಸಾಹದ ಕೊರತೆಯಿಂದ ನವರಾತ್ರಿ ಸಂದರ್ಭದಲ್ಲಿ ಕಾಣಸಿಗುತ್ತಿದ್ದ ಅನೇಕ ಸಣ್ಣಪುಟ್ಟ ವೇಷಗಳು ಮರೆಯಾಗುತ್ತಿವೆ. ಟೀಮ್ ಹನುಮಾನ್ ತಂಡದ ಯುವಕರು ಯಕ್ಷವೇಷ ಧರಿಸುವ ಮೂಲಕ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಧರ್ಮನಗರ ಶ್ರೀ ರಾಹುಗುಳಿಗ ಬನದ ಪ್ರಧಾನ ಅರ್ಚಕ ಭಾಸ್ಕರ ತೆಂಗಿನಹಿತ್ಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಅಮಿತಾ ಅಶ್ವಿನ್, ಸಾಮಾಜಿಕ ಕಾರ್ಯಕರ್ತ ರಿಚರ್ಡ್ ವೇಗಸ್, ಅಂಗನವಾಡಿ ಸಹಕಾರ ಸಂಘದ ಅಧ್ಯಕ್ಷೆ ಶಕೀಲ, ಧರ್ಮನಗರ ನಾಗಬನ ಸೇವಾ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ಧರ್ಮನಗರ, ಸುಂದರಿಭಾಗ್ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ನವನೀತ್ ಉಳ್ಳಾಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೇಲ್ವಿಚಾರಕ ಆದರ್ಶ್ ಹಾಗೂ ಟೀಮ್ ಹನುಮಾನ್ ಅಧ್ಯಕ್ಷ ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾವ್ಯ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


